ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳ ಸಮೀಪ ವಾಸಿಸುವ ಖಾಸಗಿ ವಾಹನ ಮಾಲೀಕರಿಗೆ ಟೋಲ್ ಶುಲ್ಕ ಪಾವತಿಯಲ್ಲಿ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ವಿಶೇಷ ವಾರ್ಷಿಕ ಪಾಸ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
ಈ ಯೋಜನೆಯಡಿ ಅರ್ಹ ನಿವಾಸಿಗಳು 1,500 ಅಥವಾ 3,000 ಪಾವತಿಸಿ ವಾರ್ಷಿಕ ಪಾಸ್ ಪಡೆಯಬಹುದು ಎಂದು ವರದಿಯಾಗಿದೆ.
ಹೊಸ ಯೋಜನೆಯ ಪ್ರಕಾರ, ಅರ್ಹ ಟೋಲ್ ಪ್ಲಾಜಾದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಖಾಸಗಿ ವಾಹನ ಮಾಲೀಕರು ಈ ಪಾಸ್ಗೆ ಅರ್ಜಿ ಸಲ್ಲಿಸಬಹುದು. ಟೋಲ್ ಪ್ಲಾಜಾ ಇರುವ ಪ್ರದೇಶವನ್ನು ಆಧರಿಸಿ ಪಾಸ್ನ ಶುಲ್ಕ ನಿರ್ಧರಿಸಲಾಗುತ್ತದೆ.
ನಗರ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ಶುಲ್ಕ ₹3,000 ಆಗಿದ್ದರೆ, ಗ್ರಾಮೀಣ ಪ್ರದೇಶಗಳ ಟೋಲ್ ಪ್ಲಾಜಾಗಳಿಗೆ ₹1,500 ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಟೋಲ್ ಪ್ಲಾಜಾಗಳ ಸಮೀಪ ವಾಸಿಸುವವರು ಪದೇಪದೇ ಪ್ರಯಾಣಿಸುವಾಗ ಟೋಲ್ ಶುಲ್ಕದ ಹೊರೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಮೂಲಕ ಅರ್ಹ ಸ್ಥಳೀಯ ನಿವಾಸಿಗಳಿಗೆ ಆರ್ಥಿಕ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.










