ಕೇಂದ್ರ, ರಾಜ್ಯ ಸರಕಾರ ವಿವೇಚನೆಯಿಂದ ಕೆಲಸ ಮಾಡಲಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಗೆದ್ದರೆ ಕೋವಿಡ್-19ಗೆ ಉಚಿತ ಲಸಿಕೆ ನೀಡುವುದಾಗಿ ಹೇಳಿರುವ ಬಿಜೆಪಿ ಮುಖಂಡರಿಗೆ ಇಡೀ ದೇಶದ ಜನರಿಗೆ ಉಚಿತ ಲಸಿಕೆ ಕೊಡಲು ತಾಕತ್ ಇಲ್ವಾ? ಎಂದು ಶಾಸಕ ಎಚ್.ಕೆ.ಪಾಟೀಲ ಪ್ರಶ್ನಿಸಿದರು.
ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬರಿಗೂ ಕೋವಿಡ್-19ಗೆ ಉಚಿತ ಲಸಿಕೆ ಕೊಡಬೇಕಾದದ್ದು ಆಡಳಿತದಲ್ಲಿರುವ ಸರಕಾರದ ಪ್ರಮುಖ ಜವಾಬ್ದಾರಿ ಎಂದರು.
ಮತ್ತೇ ಮುಖ್ಯಮಂತ್ರಿಯಾದರೆ ಉಚಿತ ಅಕ್ಕಿ ನೀಡುತ್ತೇನೆ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಂದ್ರೆ ನಾನು ಅಂತಾ ತಿಳಿದುಕೊಂಡಿರಬಹುದು ಎಂದು ಉತ್ತರಿಸಿದರು.
ನವೆಂಬರ್‌ನಲ್ಲಿ ಶಾಲೆ, ಕಾಲೇಜು ಆರಂಭಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಈ ನಿರ್ಧಾರವನ್ನು ಮರು ಪರಿಶೀಲನೆ ಮಾಡುವುದಕ್ಕಿಂತ ವಿರೋಧ ಪಕ್ಷಗಳನ್ನು, ಆರೋಗ್ಯ ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡು ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ತರಾತುರಿಯಲ್ಲೇ ಶಾಲೆ- ಕಾಲೇಜು ಆರಂಭ ಮಾಡುವುದು ಸಮಂಜಸವಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವೇಚನೆಯಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಚುನಾವಣೆ ನಂತರ ಕಾಂಗ್ರೆಸ್‌ನಲ್ಲಿ ಸಿಎಂ ಯಾರು ಅಂತಾ ನಿರ್ಣಯ ಆಗುತ್ತೆ. ಈಗಲೇ ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ವಿಚಾರಕ್ಕೆ ಸೂಕ್ತ ಕಾಲ ಇದಲ್ಲ. ಇಂಥ ವಿಷಯ ಹರಟೆಯ ಮಾತಾಗಬಾರದು. ಅದೆಲ್ಲ ಬಿಜೆಪಿಯವರ ಆಂತರಿಕ ಕಚ್ಚಾಟ. ಅದರ ಬಗ್ಗೆ ಹೆಚ್ಚೇನೂ ಹೇಳಲಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಕೆ.ಬಸವರಾಜ ಹಿಟ್ನಾಳ, ಶಾಂತಣ್ಣ ಮುದಗಲ್, ಮುತ್ತುರಾಜ ಕುಷ್ಟಗಿ, ರವಿ ಕುರಗೋಡ ಮತ್ತಿತರರು ಇದ್ದರು.