ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ನರೇಗಾ ಯಾ ಮರೇಗಾ ಎಂದರೆ ಈಗ ಎರಡನೆಯದ್ದೆ ಬೆಟರ್ ಎನಿಸುವಂತಹ ಸ್ಥಿತಿ ಜಿಲ್ಲೆಯಲ್ಲಿ ಉದ್ಭವಿಸಿದೆ. 3 ತಿಂಗಳುಗಟ್ಟಲೇ ಉದ್ಯೋಗ ಮಾಡಿದ್ದು ಮಾತ್ರ ಖಾತ್ರಿ, ಕೂಲಿಗೆ ಮಾತ್ರ ಕತ್ರಿ. ಜಿಲ್ಲೆಯ ಕುಕನೂರು ತಾಲೂಕು ಮಂಗಳೂರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸಿದ ಜನರಿಗೆ 3 ತಿಂಗಳಾದರೂ ಕೂಡ ಹಣ ಬಂದಿಲ್ಲ. ಜೊತೆಗೆ ಮೇಟಿಗಳಿಗೆ ಕೂಡ ನಯಾಪೈಸೆ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೂ ಕೂಡ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಮಂಗಳೂರು ಗ್ರಾಮ ಪಂಚಾಯಿತಿಯ ಸಿಬ್ಬಂದಿ ಕೂಡ ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೆ ಜನರು ಪಂಚಾಯತಿಗೆ ಅಲೆದಾಡುವ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ‘ಆಗ ಉದ್ಯೋಗ ಖಾತ್ರಿ, ಈಗ ಪಂಚಾಯತಿ ಸುತ್ರಿ’ ಎನ್ನುವಂತಹ ಪರಿಸ್ಥಿತಿ ಏರ್ಪಟ್ಟಿದೆ.
ನೂರು ದಿನಗಳ ಕಾಲದ ಉದ್ಯೋಗ ಖಾತ್ರಿ ಕೆಲಸವನ್ನು ಕೇವಲ ಹದಿನೈದು ದಿನಗಳ ಮಾತ್ರ ಒದಗಿಸಿದ್ದಾರೆ. ಇನ್ನೂ ಅನೇಕ ಜನರ ಖಾತೆಗೆ ಹಣ ಬಂದಿಲ್ಲ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ದುಡಿದ ಹಣದ ಕೂಲಿ ಒದಗಿಸಬೇಕು, ಇಲ್ಲದಿದ್ದರೆ ಪಂಚಾಯಿತಿಗೆ ಮುತ್ತಿಗೆ ಹಾಕುತ್ತೇವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.