ಎರಡು ವರ್ಷಗಳ ಬಳಿಕ ಸೋಲಿನ ಸತ್ಯ ಬಾಯ್ಬಿಟ್ಟ ಸಿದ್ದರಾಮಯ್ಯ: ಕಾಂಗ್ರೆಸ್‌ನವರೇ ನನ್ನನ್ನು ಸೋಲಿಸಿದರು!

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮೈಸೂರು

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗತಿಸಿ ಎರಡು ವರ್ಷಗಳ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಕುರಿತು ಬಹಿರಂಗವಾಗಿಯೇ ಸತ್ಯ ಬಾಯ್ಬಿಟ್ಟಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಗ್ರಾಮ ಜನಾಧಿಕಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಜನ ಪ್ರೀತಿ, ವಿಶ್ವಾಸ ತೋರಿಸಿದರು. ಆದರೆ, ಮತ ಹಾಕಲಿಲ್ಲ. ಹಾಗಾಗಿ ಬಿಜೆಪಿ ಜೆಡಿಎಸ್ ಜೊತೆ ನಮ್ಮ ಪಕ್ಷದವರೂ ಸೇರಿ ನನ್ನನ್ನು ಸೋಲಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಪಕ್ಷಕ್ಕೆ ವಿರುದ್ಧವಾಗಿ ಕೆಲಸ ಮಾಡಿದವರು ಆತ್ಮಾವಲೋಕನ ಮಾಡಿಕೊಂಡು ಅವರಿಂದವರೇ ಪಕ್ಷ ಬಿಟ್ಟು ಹೊರ ಹೋಗಬೇಕು. ಪಕ್ಷದ್ರೋಹ ಕೆಲಸ ಮಾಡುವವರಂತಹ ಖಳನಾಯಕರು ಯಾರೂ ಇಲ್ಲ. ನಾಯಕತ್ವದಲ್ಲಿ ನಂಬಿಕೆ ಇಲ್ಲವೆಂದರೆ, ಬಿಟ್ಟು ಹೋಗಬೇಕು. ಪಕ್ಷಕ್ಕೆ ಯಾರು ಅನಿವಾರ್ಯವಲ್ಲ. ವ್ಯಕ್ತಿಗಳಿಗೆ ಪಕ್ಷ ಅನಿವಾರ್ಯವಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿತ್ತು. ಪಕ್ಷದಲ್ಲಿ ಕೆಲವರಿಗೆ ನನ್ನನ್ನು ಕಂಡರೆ ಹೊಟ್ಟೆಕಿಚ್ಚು. ಹಾಗಾಗಿ ನಮ್ಮ ಪಕ್ಷದವರೇ ನನ್ನನ್ನು ಸೋಲಿಸಿದರು. ನಾನು ಬಾದಾಮಿಗೆ ಹೋಗದಿದ್ದರೂ ಅಲ್ಲಿನ ಜನ ನನ್ನನ್ನು ಗೆಲ್ಲಿಸಿದರು. ನಾನು ಮತ್ತೆ ಚುನಾವಣೆಗೆ ನಿಲ್ಲುತೇನೋ ಇಲ್ವೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಸೋಲಿಗೆ ನಮ್ಮ ಪಕ್ಷದವರೇ ಕಾರಣ. ಎರಡನೇ ಬಾರಿಗೆ ಸಿಎಂ ಆಗುವುದು ಕೆಲವರಿಗೆ ಇಷ್ಟವಿರಲಿಲ್ಲ. ನಾನು ಕಳೆದ ಚುನಾವಣೆಯಲ್ಲಿ ಇಷ್ಟೊಂದು ಕೆಟ್ಟದಾಗಿ ಸೋಲುತ್ತೇನೆ ಅಂದುಕೊಂಡಿರಲಿಲ್ಲ. ನನ್ನ ಸೋಲಿಗೆ ಅನೇಕ ಕಾರಣಗಳಿವೆ.
ಅದನ್ನು ಈಗ ಹೇಳೋದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ದರಾಮಯ್ಯ ಎರಡು ವರ್ಷಗಳ ಹಿಂದಿನ ಸೋಲಿನ ರಹಸ್ಯ ಬಿಚ್ಚಿದ್ದಾರೆ.

2018 ರಲ್ಲಿ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸೋತಿದ್ದ ಅವರು ಬಾದಾಮಿ ಕ್ಷೇತ್ರದಲ್ಲಿ ಗೆದ್ದಿದ್ದರು.

ಸದ್ಯ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಮುನ್ನುಡಿ ಬರೆದಿದ್ದಂತು ಸುಳ್ಳಲ್ಲ.


Spread the love

LEAVE A REPLY

Please enter your comment!
Please enter your name here