ರೋಚಕ ಹಣಾಹಣಿಯಲ್ಲಿ ಕಪ್ ಎತ್ತಿ ಹಿಡಿದ ಆರ್‌ಆರ್ ಬಾಯ್ಸ್
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕೆಡಬ್ಲ್ಯೂಎಸ್‌ಸಿಸಿಯ ಏಕತಾ ಕಪ್ ಕ್ರಿಕೆಟ್ ಟೂರ್ನಿ ಪ್ರತಿಷ್ಠಿತ ಐಪಿಎಲ್ ಪಂದ್ಯಾವಳಿಯನ್ನೂ ಮೀರಿಸಿ ಮಾದರಿ ಎನಿಸಿತು ಎಂದು ಡಿಎಸ್‌ಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ರವಿ ವಕ್ಕುಂದ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಸಮಾರೋಪಗೊಂಡ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ವಿಜೇತ ತಂಡಕ್ಕೆ ಕಪ್ ವಿತರಿಸಿ ಅವರು ಮಾತನಾಡಿದರು.
ಇಲ್ಲಿನ ಬಳಗದ ಕ್ರೀಡಾ ಉತ್ಸಾಹ ಇತರರಿಗೂ ಮಾದರಿ. ಶಿಸ್ತು, ಸಮಯ, ಏಕತೆ ನೋಡಿದರೆ ಮುಂದೊಂದು ದಿನ ರಾಜ್ಯಮಟ್ಟದಲ್ಲಿ ಈ ಕ್ಲಬ್ ಗುರುತಿಸಿಕೊಳ್ಳುವಲ್ಲಿ ಅನುಮಾನವಿಲ್ಲ. ನಾವು ಸಹ ಕ್ಲಬ್‌ನ ಸದಸ್ಯರಾಗುವುದಾಗಿ ತಿಳಿಸಿದರು.
ಮತ್ತೋರ್ವ ಪೊಲೀಸ್ ಅಧಿಕಾರಿ ಮಲ್ಲನಗೌಡ್ರ ಮಾತನಾಡಿ, ಟೂರ್ನಮೆಂಟ್‌ನ ಫೈನಲ್ ಪಂದ್ಯ ಅತ್ಯಂತ ರೋಮಾಂಚಕವಾಗಿದ್ದು ಕುರ್ಚಿಯ ತುದಿಗೆ ಕುಳಿತುಕೊಳ್ಳುವಂತೆ ಮಾಡಿತು. ಈ ಪಂದ್ಯ ನೋಡಿದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಂದ್ಯಗಳಿಗೆ ಕಡಿಮೆ ಇರಲಿಲ್ಲ. ಅಚ್ಚುಕಟ್ಟಾಗಿ ಟೂರ್ನಿ ನಡೆಸುವುದು ಸುಲಭದ ಕೆಲಸವಲ್ಲ. ಕ್ಲಬ್ ನಿರಂತರ ಇಂಥ ಟೂರ್ನಮೆಂಟ್ ನಡೆಸುತ್ತಿರಲಿ ಎಂದು ಆಶಿಸಿದರು.
ಪತ್ರಕರ್ತ ಬಸವರಾಜ ಕರುಗಲ್, ಕ್ಲಬ್‌ನ ಅಧ್ಯಕ್ಷ ವಿನೋದ ಚಿನ್ನಿನಾಯ್ಕರ್, ಮುಖಂಡ ಗಿರೀಶ್ ಮುಂಡಾದ ಮತ್ತಿತರರು ಮಾತನಾಡಿದರು. ಈರಣ್ಣ, ಗವಿ, ಚಂದ್ರು, ಸೂರಿ, ಶಿವು ನಿರ್ವಹಿಸಿದರು.
ಆರ್‌ಆರ್‌ಗೆ ವರವಾದ ವರುಣ; ಸಿಎಸ್‌ಕೆ ಮಡಿಲಿನಿಂದ ಜಾರಿ ಆರ್‌ಆರ್ ಕೈ ಸೇರಿದ ಕಪ್
ನಿಗದಿತ 12 ಓವರ್‌ಗಳ ಫೈನಲ್ ಪಂದ್ಯದ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ನಾಯಕ ಮಂಜುನಾಥ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಬೀಸಿದ ಸಿಎಸ್‌ಕೆ ಬಾಯ್ಸ್ ನಿಗದಿತ 12 ಓವರ್‌ಗಳಲ್ಲಿ 100 ರನ್ ಕಲೆ ಹಾಕಿದರು.
ನಂತರ ಬ್ಯಾಟಿಂಗ್ ಬಂದ ಆರ್ ಆರ್ ತಂಡದ ಹುಡುಗರಿಗೆ ವರುಣ ಅಡ್ಡಿ ಪಡಿಸಿದ. ಸುಮಾರು ಹದಿನೈದು ನಿಮಿಷ ಕಾಲ ಪಂದ್ಯ ಮಳೆಯಿಂದ ಸ್ಥಗಿತವಾಗಿತ್ತು. ಕೊನೆಗೂ ವರುಣಾರ್ಭಟ ನಿಂತಿತು. ಆಗ ಇದನ್ನು ವರವೆಂದು ಪರಿಗಣಿಸಿದ್ದ ಸಿಎಸ್‌ಕೆ ತಂಡ ಒತ್ತಡಕ್ಕೆ ಸಿಲುಕಿತು. ಜೊತೆ ಬ್ಯಾಡ್‌ಲೈಟ್‌ನ ಒತ್ತಡದಲ್ಲಿ ಬ್ಯಾಟ್ ಬೀಸಲು ಶುರು ಮಾಡಿದ ಆರ್‌ಆರ್ ದಾಂಡಿಗರು ಇನ್ನು ಒಂದು ಎಸೆತ ಬಾಕಿ ಇರುವಾಗಲೇ 101 ರನ್ ಕಲೆ ಹಾಕಿ ಏಕತಾ ಕಪ್ ಎತ್ತಿ ಹಿಡಿದರು. ಕೊಟೇಶ್ ನಾಯಕತ್ವದ ಸಿಎಸ್‌ಕೆ ಬಾಯ್ಸ್ ರನ್ನರ್ ಅಪ್ ಸ್ಥಾನ ಪಡೆದರು.