ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: 2018-19 ರ ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗೊಜನೂರ ಗ್ರಾಮದಲ್ಲಿ ಕೈಗೊಂಡಿದ್ದ ಸಾಮೂಹಿಕ ಶೌಚಾಲಯ ಕಾಮಗಾರಿಯ ಎಂ ಬಿ ಕಂಪ್ಲಿಷನ್ ಸರ್ಟಿಫಿಕೇಟ್ ಕೊಡಲು ಗುತ್ತಿಗೆದಾರರಿಂದ 15 ಸಾವಿರ ರೂ, ಲಂಚ ಕೇಳಿದ್ದ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಶಿರಹಟ್ಟಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಜೂನಿಯರ್ ಇಂಜಿನಿಯರ್ ಮೀರಾಜುದ್ದೀನ್ ಅವರೇ ಲಂಚ ಪಡೆಯುವಾಗ ಸಿಕ್ಕಿ ಬಿದ್ದವರು.
ಗದಗ ತಾಲೂಕಿನ ನರಸಾಪೂರ ಗ್ರಾಮದ ಗುತ್ತಿಗೆದಾರ ರವಿಕುಮಾರ್ ನಿಡಗುಂದಿ, ಗೊಜನೂರು ಗ್ರಾಮದಲ್ಲಿ ಎರಡು ಲಕ್ಷ ರೂ, ವೆಚ್ಚದಲ್ಲಿ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಿದ್ದರು. ಆದರೆ ಕಾಮಗಾರಿಯ ಎಂ ಬಿ ಹಾಗೂ ವರ್ಕ್ ಕಂಪ್ಲಿಷನ್ ಸರ್ಟಿಫಿಕೇಟ್ ಕೊಡಲು ಸತಾಯಿಸಲಾಗಿತ್ತು. ಅಷ್ಟೇ ಅಲ್ಲ ಎಂ ಬಿ ಹಾಗೂ ಕಂಪ್ಲಿಷನ್ ಸರ್ಟಿಫಿಕೇಟ್ ಕೊಡಲು ಪಂಚಾಯತ್ ರಾಜ್ ಇಂಜನಿಯರಿಂಗ್ ಉಪವಿಭಾಗದ ಜ್ಯೂನಿಯರ್ ಇಂಜಿನಿಯರ್ 16 ಸಾವಿರ ರೂ, ಲಂಚ ಕೇಳಿದ್ದರು. ಕೊನೆಗೂ 15 ಸಾವಿರ ರೂ,ಗಳಿಗೆ ಸೆಟ್ಲ್ ಆಗಿತ್ತು. ಈ ಕುರಿತು ಗುತ್ತಿಗೆದಾರ ರವಿಕುಮಾರ್ ಎಸಿಬಿಗೆ ದೂರು ನೀಡಿದ್ದರು.
ಎಸಿಬಿ ಡಿಎಎಸ್ಪಿ ವಾಸುದೇವ ಎನ್ ರಾಮ್ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಲಂಚದ ಹಣ ಪಡೆಯುತ್ತಿದ್ದಾಗ ಜ್ಯೂನಿಯರ್ ಇಂಜಿನಿಯರ್ ಮೀರಾಜುದ್ದೀನ್ ಅವರನ್ನು ಹಣ ಸಮೇತ ಬಂಧಿಸಲಾಗಿದೆ.
ದಾಳಿಯಲ್ಲಿ ಇನ್ಸ್ಪೆಕ್ಟರ್ ಗಳಾದ ವಾಯ್ ಎಸ್ ಧರಣಾನಾಯಕ್, ರವೀಂದ್ರ ಕುರಬಗಟ್ಟಿ, ಸಿಬ್ಬಂದಿ ಎಮ್ ಎಮ್ ಅಯ್ಯನಗೌಡರ, ಆರ್ ಎಚ್ ಹೆಬಸೂರು, ಎಮ್ ಎನ್ ಕರಿಗಾರ, ಎನ್ ಎಸ್ ತಾಯಣ್ಣವರ, ಈರಣ್ಣ ಜಾಲಿಹಾಳ, ವೀರೇಶ್ ಜೋಳದ ಹಾಗೂ ತಾರಪ್ಪ ಇದ್ದರು.