ಕತ್ತೆಗೂ ಬಂತು ಕಾಲ, ಹಾಲಿಗೂ ಬಂತು ಬೆಲೆ! ಕತ್ತೆ ಹಾಲು ಮಾರಾಟ ಜೋರು

0
Spread the love

ವಿಜಯಸಾಕ್ಷಿ ಸುದ್ದಿ, ಕಂಪ್ಲಿ

ಕಳೆದ ಎರಡು ದಿನಗಳಿಂದ ಪಟ್ಟಣದ ವಿವಿಧ ವಾರ್ಡುಗಳಲ್ಲಿ, ಬೀದಿಗಳಲ್ಲಿ ಕತ್ತೆ ಹಾಲು ಮಾರಾಟ ಜೋರಾಗಿ ನಡೆದಿದ್ದು, ಕೆಲವರು ಸಾರ್ವಜನಿಕರು ಈ ಕತ್ತೆ ಹಾಲನ್ನು ಕೊಂಡು ಮಕ್ಕಳಿಗೆ ಕುಡಿಸಿದರೆ ಇನ್ನು ಕೆಲವರು ಇದನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ದೂರದ ಆಂದ್ರ ಪ್ರದೇಶದ ನಿಜಾಮಾಬಾದ್‍ನಿಂದ ಆಗಮಿಸಿರುವ ಸುಮಾರು 5-6 ಕುಟುಂಬಗಳು ಪಟ್ಟಣದ ಕುರುಗೋಡು ರಸ್ತೆಯ ಸಾಯಿಬಾಬ ಉದ್ಯಾನದ ಬಳಿಯಲ್ಲಿ ಟೆಂಟು ಹಾಕಿದ್ದಾರೆ. ಇವರೊಂದಿಗೆ ಸುಮಾರು 20 ಅಧಿಕ ಸಂಖ್ಯೆಯಲ್ಲಿ ಕತ್ತೆಗಳನ್ನು ಸಹ ತೆಗೆದುಕೊಂಡು ಬಂದಿದ್ದು, ಪ್ರತಿದಿನ ಬೆಳಿಗ್ಗೆ ಕತ್ತೆಯ ಹಾಲವನ್ನು ಕರೆದು ಅದನ್ನು ಸಣ್ಣ ಬಾಟಲಿಗಳಲ್ಲಿ ಸಂಗ್ರಹಿಸಿಕೊಂಡು ಜೊತೆಗೆ 30 ಮಿ.ಮೀ.ಸಣ್ಣ ಬಾಟಲಿಯೊಂದಿಗೆ ಕತ್ತೆಗಳ ಜೊತೆ ಬೀದಿ ಬೀದಿ ಸುತ್ತುತ್ತಾ ಕತ್ತೆ ಹಾಲು ಮಾರಾಟ ಮಾಡುತ್ತಿದ್ದಾರೆ.

ಜೊತೆಗೆ ಮನೆ ಮನೆಗೆ ತೆರಳುವ ಇವರು ಈ ಕತ್ತೆ ಹಾಲನ್ನು ಮಕ್ಕಳಿಗೆ ಹಾಕಿದರೆ, ವಿವಿಧ ದೈಹಿಕ ಕಾಯಿಲೆಗಳು ದೂರಾಗುತ್ತವೆ, ದಮ್ಮು ಕೆಮ್ಮು ಬರುವುದಿಲ್ಲವೆಂದು ಸಾರ್ವಜನಿಕರನ್ನು ಮನವೊಲಿಸುತ್ತಿದ್ದಾರೆ. ಇವರ ಮಾತುಗಳನ್ನು ಕೇಳುವ ಕೆಲವರು ಹಾಲನ್ನು ಕೊಂಡರೆ ಇನ್ನು ಕೆಲವರು ಕತ್ತೆ ಹಾಲಾ ಎಂದು ಮೂಗು ಮುರಿಯುತ್ತಾರೆ.

ಕತ್ತೆ ಹಾಲು ಮಾರಲು ಬಂದ ರಾಜಮ್ಮ ಎನ್ನುವ ಮಹಿಳೆಯನ್ನು ಮಾತನಾಡಿಸಿದಾಗ ತೆಲುಗಿನಲ್ಲಿ ಮಾತನಾಡಿದ ಅವರು, ನಾವು ದೂರದ ನಿಜಾಮಾಬಾದನಿಂದ ಬಂದಿದ್ದು, ಅತ್ಯಂತ ಅಧಿಕ ಪ್ರಮಾಣದಲ್ಲಿ ರೋಗ ನಿರೋಧ ಶಕ್ತಿಯನ್ನು ಹೊಂದಿರುವ ಹಾಲನ್ನು ಸೇವಿಸುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲವೆಂದು ತಿಳಸಿದರು.

30.ಮಿ.ಮೀ.ಹಾಲನ್ನು 100 ರೂ.ಗಳಿಗೆ ಮಾರುತ್ತೇವೆ ಎಂದರು. ಕೆಲವು ದಿನ ಪಟ್ಟಣದಲ್ಲಿ ಹಾಲು ಮಾರಿ ನಂತರ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಹಾಲು ಮಾರುತ್ತೇವೆ ಎಂದು ರಾಜಮ್ಮ ತಿಳಿಸಿದರು.

ನಿಜಾಮಾಬಾದಿನಿಂದ ಪುರುಷರು, ಮಹಿಳೆಯರು ಸೇರಿ ಸುಮಾರು 30 ಜನ ಆಗಮಿಸಿದ್ದು, ಪ್ರತಿದಿನ ಬೆಳಿಗ್ಗೆ ಹಾಲು ಮಾರಲು ತೆರಳಿ ಸಂಜೆಗೆ ನಾವು ವಾಸಿಸುವ ಪ್ರದೇಶಕ್ಕೆ ಆಗಮಿಸುತ್ತೇವೆ ಎಂದರು.


Spread the love

LEAVE A REPLY

Please enter your comment!
Please enter your name here