36.4 C
Gadag
Friday, June 2, 2023

‘ಕಪ್ಪತ’ಗಿರಿ ಬಿಟ್ಟು ನಗರದಲ್ಲೇಕೆ ಉತ್ಸವ?: ಉತ್ಸವದ ನೆಪದಲ್ಲಿ ಸರ್ಕಾರದ ಹಣ ಲೂಟಿ ಆರೋಪ?

Spread the love

  • ಕಾಡಂಚಿನ 32 ಹಳ್ಳಿ ಜನರಿಗಿಲ್ಲ ಜಾಗೃತಿ

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ

ಕಪ್ಪತಗುಡ್ಡ ಬಯಲು ಸೀಮೆಯ ಸಹ್ಯಾದ್ರಿ ಎಂದೇ ಪ್ರಖ್ಯಾತಿ ಪಡೆದಿದ್ದು, ತನ್ನೊಡಲೊಳಗೆ ಅಪಾರ ಪ್ರಮಾಣದ ಔಷಧೀಯ ಸಸ್ಯಗಳು, ವನ್ಯಜೀವಿ, ಖನಿಜ ಸಂಪತ್ತು ಶೇಖರಿಸಿಕೊಂಡಿದೆ. ಸಂಪತ್ಭರಿತ ಪ್ರದೇಶದೊಂದಿಗೆ ಜಿಲ್ಲೆಯನ್ನು ಶ್ರೀಮಂತಗೊಳಿಸಿ ಪ್ರಾಕೃತಿಕ ಸೌಂದರ್ಯ ಹೆಚ್ಚಿಸಿದೆ.

ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪ್ರತಿವರ್ಷ ಕಪ್ಪತ ಉತ್ಸವ ಹಮ್ಮಿಕೊಳ್ಳುತ್ತಿದ್ದು, ಅಧಿಕಾರಿಗಳು ಕಪ್ಪತಗುಡ್ಡದ ಸೆರಗಿನ ಹಳ್ಳಿಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹರಡಿರುವ ಕಪ್ಪತ್ತಗುಡ್ಡದ ಉತ್ಸವ ಗದಗನಲ್ಲಿ ಆಚರಣೆ ಮಾಡುವುದು ಬಿಟ್ಟು ಕಪ್ಪತ್ತಗುಡ್ಡದಲ್ಲಿಯೇ ಆಚರಿಸಬೇಕು ಎಂದು ಗುಡ್ಡದಂಚಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಮಾರು 80 ಕಿ.ಮೀ. ವಿಸ್ತೀರ್ಣದ ಕಪ್ಪತಗುಡ್ಡ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕು ವ್ಯಾಪ್ತಿಯುದ್ದಕ್ಕೂ ಚಾಚಿಕೊಂಡಿದ್ದು, 32 ಹಳ್ಳಿಗಳನ್ನು ಒಳಗೊಂಡಿದೆ. ಹೇರಳ ಔಷಧ ಸಸ್ಯಗಳನ್ನೊಳಗೊಂಡಿರುವ ಕಪ್ಪತಗುಡ್ಡ ಹಚ್ಚ ಹಸಿರಿನಿಂದ ಕಂಗೊಳಿಸುತ್ತ ಮನಸ್ಸಿಗೆ ಮುದ ನೀಡುತ್ತಿದೆ. ವನ್ಯಜೀವಿಗಳು, ವಿವಿಧ ಸಸ್ಯ ಪ್ರಭೇದಗಳು, ವನಸ್ಪತಿ ಹಾಗೂ ಹಳ್ಳಕೊಳ್ಳಗಳನ್ನು ಹೊಂದಿರುವ ಕಪ್ಪತಗುಡ್ಡ ಸದ್ಯ ಮಾನವನ ದುರಾಸೆಯಿಂದಾಗಿ ನಶಿಸಿ ಹೋಗುತ್ತಿದೆ.

ಬೇಸಗೆಯಲ್ಲಿ ಗುಡ್ಡಕ್ಕೆ ಬೆಂಕಿ

ಬೇಸಗೆಯಲ್ಲಿ ಕಾಡಂಚಿನ ಪ್ರದೇಶದಲ್ಲಿ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಹಾಗೂ ವಿಂಡ್ ಮಿಲ್‌ಗಳಿಂದ ಉಂಟಾಗುವ ಕಿಡಿಯಿಂದ ಅನೇಕ ಜೀವ, ಸಸ್ಯ ಸಂಪತ್ತು ಸುಟ್ಟು ಕರಕಲಾಗುತ್ತಿದೆ. ಮಲ್ಲಯ್ಯನ ನೆತ್ತಿ ಸುಟ್ಟರೆ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂಬ ಮೂಢನಂಬಿಕೆ ಹೋಗಲಾಡಿಸಿ ಕಾಡಂಚಿನ ಜನರಲ್ಲಿ ಜಾಗೃತಿ ಮೂಡಿಸಬೇಕು.

ಗಣಿ ಕುಳಗಳ ಕಣ್ಣು

ಜಿಲ್ಲೆಯ ಪ್ರಕೃತಿ ಸೌಂದರ್ಯ ಹೆಚ್ಚಿಸಿದ ರಮಣೀಯ ಸಂಪತ್ಭರಿತ ಗುಡ್ಡದ ಮೇಲೆ ಗಣಿ ಕುಳಗಳ ಕಣ್ಣು ಬಿದ್ದಿದೆ. ಕಪೋತಗಿರಿಯನ್ನು ನಾಶಗೊಳಿಸಲು ಅವರೆಲ್ಲ ಹೊಂಚು ಹಾಕಿ ಕುಳಿತಿರುವುದು ದುರದೃಷ್ಟಕರ. ಹಾಗಾಗಿ ಪ್ರಾಣಿ ಪಕ್ಷಿಗಳನ್ನು ಒಕ್ಕಲೆಬ್ಬಿಸುವ ಜನರನ್ನ ಮಟ್ಟ ಹಾಕಬೇಕಿದೆ.

ಗುಡ್ಡದೊಂದಿಗೆ ಭಾವನಾತ್ಮಕ ಸಂಬಂಧ

ಕಪ್ಪತ್ತಗುಡ್ಡದ ಸುತ್ತಲಿನಲ್ಲಿ 32 ಹಳ್ಳಿಗಳು ಬರುತ್ತವೆ. ಈ ಹಳ್ಳಿಗಳ ಜನರು ಕಪ್ಪತ್ತಗುಡ್ಡದ ಜೊತೆಯಲ್ಲಿ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಕಪ್ಪತ್ತಗುಡ್ಡದ ಸಂರಕ್ಷಣೆ ಮಾಡುವ ಹೊಣೆಗಾರಿಕೆಯೂ ಇಲ್ಲಿನ ಜನರ ಮೇಲಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಪ್ಪತ್ತಗುಡ್ಡದ ಉತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಲು ಹೊರಟಿರುವುದು ಅಕ್ಷಮ್ಯವಾಗಿದೆ.

ಜನರ ಭಾವನೆಗೆ ಸ್ಪಂದಿಸಿ

ಕಪ್ಪತ್ತಗುಡ್ಡದ ಸುತ್ತಮುತ್ತಲಿನ ಜನರ ಜೊತೆಗೆ ಕಪ್ಪತ್ತಗುಡ್ಡದ ರಕ್ಷಣೆ ಕುರಿತು ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕಿದೆ. ಉತ್ಸವದಲ್ಲಿ ಈ ಭಾಗದ ಜನರು ಪಾಲ್ಗೊಳ್ಳಲು ಭಾಗೀದಾರರಾಗಬೇಕು. ಕಪ್ಪತ್ತಗುಡ್ಡದ ಉತ್ತರದಾಯಿತ್ವವು ಬರೀ ಅರಣ್ಯ ಇಲಾಖೆಗೆ ಸಂಬಂಧಿಸಿದ್ದಲ್ಲ. ಈ ಭಾಗದ ಜನರು, ರೈತರು, ಪರಿಸರವಾದಿಗಳಿಗೂ ಸಂಬಂಧಿಸಿದೆ. ಕಪ್ಪತ್ತಗುಡ್ಡದ ಉತ್ಸವವನ್ನು ಕಪ್ಪತ್ತಗುಡ್ಡದ ಪರಿಸರದಲ್ಲೇ ಆಚರಿಸುವ ಮೂಲಕ ಈ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಬೇಕು.

ಉತ್ಸವ ಯಾವ ಪುರುಷಾರ್ಥಕ್ಕೆ?

ಕಳೆದ ಫೆಬ್ರವರಿಯಲ್ಲಿಯೂ ಇದೆ ರೀತಿ ನಗರದಲ್ಲಿ ಕಪ್ಪತ ಉತ್ಸವ ನಡೆದಾಗಲೂ ಕಪ್ಪತಗುಡ್ಡದಂಚಿನ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಕಪ್ಪತಗುಡ್ಡದಲ್ಲಿಯೇ ಉತ್ಸವ ಹಮ್ಮಿಕೊಳ್ಳುವಂತೆ ಮನವಿ ಸಲ್ಲಿಸಿದ್ದರಂತೆ. ಆದರೆ, ಕೋಟ್ಯಂತರ ಹಣ ಖರ್ಚು ಮಾಡಿ ’ವನದೇವಿ’ ನರ್ಸರಿ ನಿರ್ಮಿಸಿದ್ದೇಕೆ? ಮತ್ತು ನಗರದಲ್ಲಿ ಕಪ್ಪತ ಉತ್ಸವ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಎದ್ದಿದೆ.

ಉತ್ಸವದ ಹೆಸರಲ್ಲಿ ಹಣ ಲೂಟಿ?

ಪ್ರತಿವರ್ಷ ನಗರದಲ್ಲಿ ನಡೆಯುವ ಕಪ್ಪತ ಉತ್ಸವಕ್ಕೆ ಹಳ್ಳಿ ಜನಕ್ಕೆ ದಿನಗೂಲಿಯಂತೆ ದುಡ್ಡು ಕೊಟ್ಟು
ಕಾರ್ಯಕ್ರಮಕ್ಕೆ ಕರೆ ತರುತ್ತಿದ್ದಾರೆ. ಕಾಟಾಚಾರಕ್ಕೆ ಕಪ್ಪತ ಉತ್ಸವ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ. ಕೋಟಿಗಟ್ಟಲೇ ಹಣ ವ್ಯಯಿಸಿದ್ದು, ಬೋರ್ಗಲ್ಲು ಮೇಲೆ ನೀರು ಸುರಿದಂತೆ ಎಂದು ಡೋಣಿ ಗ್ರಾಮದ ಶಂಕರಗೌಡ ಜಾಯಿನಗೌಡರ ಆರೋಪಿಸಿದ್ದಾರೆ.

ನಮ್ಮದು ಇಷ್ಟೇ!

ಸರ್ಕಾರದಿಂದ ಕಾರ್ಯಕ್ರಮಕ್ಕೆ ಅನುದಾನ ಕೊಟ್ಟಿಲ್ಲ. ಕಳೆದ ವರ್ಷ ಪ್ರಾರಂಭಿಸಿದ ಕಪ್ಪತ ಉತ್ಸವ ಮುಂದುವರಿಸುತ್ತಿದ್ದೇವೆ. ಆರೋಪ ಏನು ಬೇಕಾದರೂ ಮಾಡಬಹುದು. ಕಾರ್ಯಕ್ರಮ ನಡೆಸಲು ಅನುದಾನ, ಸೌಲಭ್ಯ ಇರಬೇಕು. ಕಪ್ಪತಗುಡ್ಡದಲ್ಲಿ ಎಲ್ಲೂ ಸೌಲಭ್ಯಗಳಿಲ್ಲ. ಜನರನ್ನು ಕರೆದುಕೊಂಡು ಹೋಗಿ ಎಲ್ಲಿ ಕೂರಿಸುತ್ತೀರಿ? ಯಾವ ಊರಲ್ಲಿ ಮಾಡುತ್ತೀರಿ? ಯಾವ ಹಳ್ಳಿಯಲ್ಲಿ ಮಾಡಬೇಕು? ಡಂಬಳದಲ್ಲಿ ಮಾಡಿದರೆ ಡೋಣಿಯವರು, ಡೋಣಿಯಲ್ಲಿ ಮಾಡಿದರೆ ಕಡಕೋಳದವರು ಗಲಾಟೆ ಮಾಡ್ತಾರೆ. ಕಪ್ಪತಗುಡ್ಡ ಅಂದರೆ 58 ಊರು ಇವೆ. ನೀವು ಬರೀತೀರಿ ಅವರು ಹೇಳುತ್ತಾರೆ. ಈ ರೀತಿ ಮಾಡಿದರೆ ನಾವು ಕೆಲಸ ಮಾಡಲು ಆಗುವುದಿಲ್ಲ. ನಮ್ಮದು ಇಷ್ಟೇ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಖಾರವಾಗಿ ಪ್ರತಿಕ್ರಿಯಿಸಿದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Posts