ಮುಲಾಲಿಗೆ ಶೇಖರಗೌಡ ತಿರುಗೇಟು
-ಅನುಭವ ಇದೆ, ವಯಸ್ಸಾಗಿಲ್ಲ..
-ಅನನುಭವಿಗಳಿಂದ ಪಾಠ ಕಲಿಯಬೇಕಿಲ್ಲ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಸಾಪ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಲಿ ಎಂದು ಹೇಳಿರುವವರು ಕಸಾಪದ ಸ್ಥಾನಮಾನಗಳು ಕನ್ನಡ ನಾಡು-ನುಡಿಗೆ ಮಾಡಬೇಕಾದ ಸೇವೆ ಎಂಬುದನ್ನು ಮರೆತು ಅದನ್ನೊಂದು ನೌಕರಿ ಎಂದು ಭಾವಿಸಿದಂತಿದೆ. ನಿವೃತ್ತಿ ಹೊಂದಲು ಅದೇನು ನೌಕರಿಯಲ್ಲ, ಬದಲಾಗಿ ನುಡಿಸೇವೆಗಿರುವ ಸ್ಥಾನವಷ್ಟೇ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಶೇಖರಗೌಡ ಮಾಲೀಪಾಟೀಲ ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್‌ನಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ ಅನುಭವ ಹೊಂದಿದ್ದೇನೆ. 90ಕ್ಕೂ ಹೆಚ್ಚು ವಯಸ್ಸಾದ ಗೋರುಚ ಅಂಥವರೆ ನುಡಿಸೇವೆಯಲ್ಲಿ ನಿರತರಾಗಿದ್ದಾರೆ. ನನಗೇನು ಮಗಾ ವಯಸ್ಸಾಗಿದೆ. ಅನನುಭವಿಗಳಿಂದ ನಾನೇನು ಪಾಠ ಕಲಿಯಬೇಕಿಲ್ಲ. ಅದು ಅವರ ಅಭಿಪ್ರಾಯವಷ್ಟೇ. ಇದುವರೆಗೂ ಚುನಾವಣೆಯಿಂದ ಹಿಂದೆ ಸರಿಯುವ ಕುರಿತು ಅವರು ನನ್ನೊಂದಿಗೆ ಚರ್ಚಿಸಿಲ್ಲ ಎಂದು ಹೆಸರು ಉಲ್ಲೇಖಿಸದೇ ರಾಜ್ಯಾಧ್ಯಕ್ಷ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ರಾಜಶೇಖರ ಮುಲಾಲಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಸುಮಾರು 3.10 ಲಕ್ಷ ಜನ ಕಸಾಪ ಮತದಾರರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸರಿಸುಮಾರು 1.50 ಲಕ್ಷ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಸುಮಾರು 50 ಸಾವಿರ ಕಸಾಪ ಮತದಾರರಿದ್ದಾರೆ. ಇದುವರೆಗೂ ಉತ್ತರ ಕರ್ನಾಟಕದ ಇಬ್ಬರು ಮಹನೀಯರು ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ 20 ಜಿಲ್ಲೆಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಈ ಹಿಂದೆ ಎರಡು ಬಾರಿ ಜಿಲ್ಲಾಧ್ಯಕ್ಷರಾಗಿ ಸಾಹಿತ್ಯ ಪರಿಷತ್ತನ್ನು ಜನರಿಗೆ ಪರಿಚಯಿಸಿದ್ದೇನೆ. ಕೊಪ್ಪಳ ನನ್ನ ತವರು ಜಿಲ್ಲೆ. ನಾನು ಜಿಲ್ಲೆಗೆ ಮನೆ ಮಗ ಇದ್ದಂತೆ. ಜಿಲ್ಲೆಯ ಜನರು ಕಸಾಪ ಚುನಾವಣೆಯಲ್ಲಿ ನನ್ನ ಪರವಾಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
![](http://vijayasakshi.com/wp-content/uploads/2021/02/img-20210226-wa00222457273897184974372.jpg)
ಕಸಾಪ ಸ್ಥಾನಗಳಿಗೆ ಸ್ಪರ್ಧಿಸಲು ಸಾಹಿತಿಯೇ ಆಗಿರಬೇಕು ಎಂಬ ನಿಯಮಾವಳಿ ಇಲ್ಲ. ಓದು-ಬರಹ ಗೊತ್ತಿರುವ 18 ವರ್ಷ ತುಂಬಿರುವ ಯಾರಾದರೂ ಸ್ಪರ್ಧಿಸಬಹುದು. ಆದರೂ ನಾನು 3 ಪ್ರವಾಸ ಕಥನ ಸೇರಿದಂತೆ ಒಟ್ಟು 6 ಪುಸ್ತಕ ಹೊರತಂದಿದ್ದೇನೆ. ಹರಿಕೃಷ್ಣ ಪುನರೂರು ಅವರಂಥ ಉದ್ಯಮಿಗಳು, ಜಿ.ನಾರಾಯಣ ಅವರಂಥ ರಾಜಕಾರಣಿಗಳು ಕಸಾಪದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ರಾಜಕಾರಣಿ, ಉದ್ಯಮಿ, ಸಾಹಿತಿಯಲ್ಲ ಅನ್ನೋದು ಮುಖ್ಯವಲ್ಲ. ಸಂಘಟನಾ ಚತುರತೆ ಪ್ರಧಾನವಾದದ್ದು. ನಾನು ಪಕ್ಷವೊಂದರ ಜೊತೆ ಗುರುತಿಸಿಕೊಂಡಿರಬಹುದು, ಹಾಗೆಂದು ಈ ವಿಷಯದಲ್ಲಿ ರಾಜಕಾರಣ, ಜಾತಿ ಬೆರೆಸಲಾರೆ. ಕನ್ನಡ ನಾಡು-ನುಡಿ ಸೇವೆ ಮಾಡಲು ನಾನು ಸಮರ್ಥನಿದ್ದೇನೆ. ಜನ ನನ್ನ ಕೈ ಹಿಡಿತಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ್ ಅಂಗಡಿ, ಹಿರಿಯ ಸಾಹಿತಿಗಳಾದ ವಿ.ಬಿ.ರಡ್ಡೇರ್, ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ್ ಇತರರು ಇದ್ದರು.