ಕಾರಟಗಿಯಲ್ಲಿ ವಿವಾಹಿತೆ ಹತ್ಯೆ: ಇಬ್ಬರು ಆರೋಪಿಗಳ ಸೆರೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕಾರಟಗಿಯ ಚನ್ನಬಸವೇಶ್ವರ ನಗರದಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ದಂಪತಿಯ ಮೇಲೆ ಹಲ್ಲೆ ಮಾಡಿ, ಮಹಿಳೆಯ ಹತ್ಯೆ ಹಾಗೂ ಆಕೆಯ ಪತಿ ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿರುವ ಪೊಲೀಸರು ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅ. 17ರಂದು ಸಂಜೆ ಖಾಸಗಿ ಬ್ಯಾಂಕ್ ಗಳಲ್ಲಿ ಉದ್ಯೋಗಿಗಳಾಗಿರುವ ತ್ರಿವೇಣಿ (34) ಹಾಗೂ ಆಕೆಯ ಪತಿ ವಿನೋದ್ (31) ಬೈಕ್ ಮೇಲೆ ತೆರಳುತ್ತಿದ್ದಾಗ ಅಪರಿಚಿತರು ರಾಡ್‌ನಿಂದ ಹಲ್ಲೆ ಮಾಡಿದ್ದರು. ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದ ತ್ರಿವೇಣಿ ಸ್ಥಳದಲ್ಲೇ ಮೃತಪಟ್ಟರೆ, ವಿನೋದ್ ಗಂಭೀರ ಸ್ಥಿತಿಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಗಂಗಾವತಿ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ತನಿಖೆ ನಡೆಸಿರುವ ಗಂಗಾವತಿ ಗ್ರಾಮೀಣ ವೃತ್ತದ ಸಿಪಿಐ ಉದಯರವಿ, ಕಾರಟಗಿ ಪಿಎಸ್‌ಐ ಅವಿನಾಶ್, ಕನಕಗಿರಿ ಪಿಎಸ್‌ಐ ಪ್ರಶಾಂತ್ ಹಾಗೂ ಸಿಬ್ಬಂದಿಯ ಎರಡು ತಂಡಗಳು ಆರೋಪಿಗಳಾದ ಮಧೋಳದ ಅವಿನಾಶ ಶಿವಾಜಿರಾವ್ ಚಂದನಶಿವ ಹಾಗೂ ಯುವರಾಜ ಸದಾಶಿವ ನಿಂಬಾಳ್ಕರ್ ಎಂಬವರನ್ನು ಬಂಧಿಸಿದ್ದಾರೆ.
ವಯಸ್ಸಿನಲ್ಲಿ ಕಿರಿಯರಾದ, ಅನ್ಯಜಾತಿಯ ಯುವಕ ವಿನೋದ್ ಅವರನ್ನು ತ್ರಿವೇಣಿ ಪ್ರೀತಿಸಿ ಮದುವೆಯಾಗಿದ್ದು, ಇದಕ್ಕೆ ಮನೆಯಲ್ಲಿ ವಿರೋಧವಿತ್ತು. ಆಕೆಯ ಸಹೋದರನೇ ಇತರರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ, ಒಂದೆರಡು ಪ್ರಯತ್ನಗಳು ವಿಫಲವಾದ ಬಳಿಕ ಅ. 17ರಂದು ಮತ್ತೊಮ್ಮೆ ದಾಳಿ ಮಾಡಿದ ತಂಡ ತ್ರಿವೇಣಿ ಅವರನ್ನು ಹತ್ಯೆ ಮಾಡಿದ್ದು, ವಿನೋದ್ ಅವರನ್ನು ಗಂಭೀರವಾಗಿ ಗಾಯಗೊಳಿಸಿ, ಪರಾರಿಯಾಗಿತ್ತು. ಈ ಪ್ರಕರಣ ಮರ್ಯಾದಾ ಹತ್ಯೆ ಎಂಬ ಶಂಕೆ ಪೊಲೀಸರಿಂದಲೂ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.
ತನಿಖಾ ತಂಡದಲ್ಲಿ ಕಾರಟಗಿ ಠಾಣೆಯ ಸಿಬ್ಬಂದಿ ಭೀಮಣ್ಣ, ಮಾರುತಿ, ಅಮರಪ್ಪ, ಮಂಜು ಸಿಂಗ್, ಶರಣಪ್ಪ, ಶಿವರಾಜ, ಪ್ರಸನ್ನಕುಮಾರ, ಬಸವರಾಜ, ನಾಗರಾಜ, ಕನಕಗಿರಿ ಠಾಣೆ ಸಿಬ್ಬಂದಿ ಶೇಖರ್, ಕೊಟ್ರೇಶ್, ಬೈಲಪ್ಪ, ಅರ್ಜುನ್ ಅವರಿದ್ದು, ಕೊಪ್ಪಳ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ, ಪ್ರಶಂಸಾ ಪತ್ರ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here