ಖಾತೆ ಬದಲಾವಣೆ ನೋವುಂಟು ಮಾಡಿದೆ: ಸಂಕನೂರ ಹೇಳಿಕೆಗೆ ಸಚಿವ ಸಿ.ಸಿ.ಪಾಟೀಲ್ ತಿರುಗೇಟು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಸಚಿವರಾಗಿದ್ದ ಸಿ.ಸಿ.ಪಾಟೀಲ್ ಅವರಿಂದ ಖಾತೆ ಬದಲಾವಣೆ ಮಾಡಿದ್ದು ಬಹಳ ನೋವನ್ನುಂಟು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಬೇಸರ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕಪ್ಪತ ಉತ್ಸವ-2021 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಈ ವಿಷಯ ಹೇಳಿದರು.

ಸಚಿವ ಸಿ.ಸಿ.ಪಾಟೀಲ್ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಇದ್ದಕ್ಕಿದ್ದ ಹಾಗೆ ಖಾತೆ ಬದಲಾವಣೆ ಮಾಡಿ ಸಿಸಿ ಪಾಟೀಲ್ ಅವರಿಗೆ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ ಖಾತೆ ನೀಡಿದ್ದಾರೆ. ಆದರೆ, ಖಾತೆ ಬದಲಾವಣೆ ಯಾಕೆ ಮಾಡಿದರು ಎಂಬುವುದು ಮುಖ್ಯಮಂತ್ರಿಗಳಿಗೆ ಗೊತ್ತು. ಇದರಿಂದ ತುಂಬಾ ನೋವಾಗಿದೆ ಎಂದು ವಿಧಾ‌ನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ವಿಷಾದ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿ ಸಿ.ಸಿ.ಪಾಟೀಲ ಅವರು, ನನ್ನ ಬಗ್ಗೆ ಎಸ್.ವಿ.ಸಂಕನೂರ ಅವರು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅವರಿಗೆ ನಾನು ಅಭಾರಿಯಾಗಿದ್ದೇನೆ. ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ, ಖಾತೆ ಬದಲಾವಣೆ ಬಗ್ಗೆ ನಾನು ಕೂದಲೆಳೆಯಷ್ಟು ಅಸಮಧಾನವಾಗಿಲ್ಲ, ಬೇಸರವೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿದ್ದರು. ಆಗ ಭಾಗ್ಯಲಕ್ಷ್ಮೀ ಮತ್ತು ಬಾಲ ಸಂಜೀವಿನಿ ಯೋಜನೆಗಳನ್ನು ಜಾರಿಗೊಳಿಸಿರುವ ಕೀರ್ತಿ ಇದೆ. ಅದನ್ನು ಅಳಿಸಿ ಹಾಕಲು ಸಾಧ್ಯವಿಲ್ಲ ಎಂದರು.

ಈ ಬಾರಿ ಗಣಿ‌ ಮತ್ತು ಭೂ ವಿಜ್ಞಾನ ಇಲಾಖೆ ಕೊಟ್ಟಿದ್ದರು. ಅವ್ಯವಸ್ಥೆಯ ಆಗರವಾಗಿತ್ತು. ಅಕ್ರಮ ಗಣಿಗಾರಿಕೆ ಚಟುವಟಿಕೆ ತಡೆಯಲು ಪ್ರಾಮಾಣಿಕವಾಗಿ ಪ್ರಯತ್ನಸಿದ್ದೇನೆ. ಖಾತೆ ಬದಲಾವಣೆ ಸಿಎಂ ಪರಾಮಾಧಿಕಾರ. ಪ್ರತಿ ಜಿಲ್ಲೆಗೂ ಅವಶ್ಯವಾಗುವ ಸಣ್ಣ ಕೈಗಾರಿಕೆ ಕೊಟ್ಟಿದ್ದಾರೆ. ಅದರ ಜೊತೆಗೆ ಸಿಎಂ ಬಳಿಯೇ ಇರಬೇಕಾದ ಖಾತೆಯನ್ನು ನನ್ನ ಮೇಲೆ ವಿಶ್ವಾಸವಿಟ್ಟು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಟ್ಟಿದ್ದಕ್ಕೆ ಯಡಿಯೂರಪ್ಪ ಅವರಿಗೆ ಅಭಾರಿಯಾಗಿದ್ದೇನೆ ಎಂದು ಅಭಿಪ್ರಾಯಪಟ್ಟರು.

ಗಣಿ ಮತ್ತು ಅರಣ್ಯ ಇಲಾಖೆಗಳೆರಡು ಎಣ್ಣೆ ಸೀಗೆಕಾಯಿ ಸಂಬಂಧವಿದ್ದಂತೆ. ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಗಣಿಗಾರಿಕೆ ಬೇಕು. ನಾಳಿನ ಪರಿಸರ ಬೇಕಾದರೆ ಅರಣ್ಯ ಉಳಿಯಲೇಬೇಕು. ಅವೆರಡೂ ಇಲಾಖೆಗಳನ್ನೂ ಸಮರ್ಥವಾಗಿ ನಿಭಾಯಿಸಿದ ತೃಪ್ತಿ ನನಗೆ ಇದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.


Spread the love

LEAVE A REPLY

Please enter your comment!
Please enter your name here