30.8 C
Gadag
Monday, May 29, 2023

ಗಜೇಂದ್ರಗಡದಲ್ಲೊಂದು ಅಮಾನವೀಯ ಘಟನೆ; ಪ್ರೀತಿಸಿದ ತಪ್ಪಿಗೆ ಹೆತ್ತಪ್ಪನ ಅಂತಿಮ ದರ್ಶನಕ್ಕೆ ಅವಕಾಶ ನೀಡದ ಕುಟುಂಬಸ್ಥರು

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಇದು ಕುಟುಂಬವೊಂದರ ಸದಸ್ಯರು 12 ವರ್ಷಗಳ ನಂತರವೂ ದ್ವೇಷ ಸಾಧಿಸಿದ ಘಟನೆ. ಸಾವು ಘಟಿಸಿದ ಸೂತಕದ ಮನೆಯಲ್ಲೂ ಅಸಹನೆ, ಪ್ರತಿಷ್ಠೆಗಾಗಿ ತನ್ನ ಒಡ ಹುಟ್ಟಿದವಳನ್ನೇ ಮೃತರಾದ ತನ್ನ ತಂದೆಯ ಅಂತಿಮ ದರ್ಶನಕ್ಕೆ ಅವಕಾಶ ನೀಡದೇ ಅಮಾನವೀಯವಾಗಿ ನಡೆದುಕೊಂಡವರ ಕರಾಳ ಮುಖದ ಕತೆ.

ಮಂಗಳನ ಅಂಗಳಕ್ಕೆ ಕಾಲಿಟ್ಟು, ಅಲ್ಲಿ ಬದುಕು ಕಟ್ಟಿಕೊಳ್ಳಲು ಮನುಷ್ಯ ಹವಣಿಸುತ್ತಿರುವ ಹೊತ್ತಲ್ಲೇ ಭೂಮಿ ಮೇಲಿರುವ ಮನುಷ್ಯ ಸಮಾಜದ ಕೆಲವು ಜನರು ತಮ್ಮ ಮನದ ಅಂಗಳದ ಮೇಲೆ ದ್ವೇಷವನ್ನೇ ಬಿತ್ತಿ ಬೆಳೆದುಕೊಂಡಿದ್ದಾರೆಂದರೆ ತಪ್ಪಾಗದು.

ಇದು ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದ ಘಟನೆ. ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿಯೊಬ್ಬರು ಎರಡು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗಿದ್ದ ಹಲವು ಜನ ಮಕ್ಕಳಲ್ಲಿ ಕೊನೆಯ ಪುತ್ರಿಗೆ ಅಂತಿಮ ದರ್ಶನಕ್ಕೂ ಕುಟುಂಬದ ಸದಸ್ಯರು ಅವಕಾಶ ನೀಡಲಿಲ್ಲ. ಪರವೂರಿನಲ್ಲಿರುವ ಆ ಮಗಳು ಫೋನ್ ಮಾಡಿ, ಅಂತಿಮ ದರ್ಶನಕ್ಕೆ ಅವಕಾಶ ನೀಡಿ ಎಂದು ಎಷ್ಟು ಗೋಗರದೆದರೂ ಕುಟುಂಬಸ್ಥರ ಕಲ್ಲು ಹೃದಯ ಕರಗಲೇ ಇಲ್ಲ. ಹೀಗೆ ಆ ಹೆಣ್ಣುಮಗಳನ್ನು ತನ್ನದೇ ತಂದೆಯ ಅಂತಿಮ ದರ್ಶನಕ್ಕೆ ಅವಕಾಶ ನೀಡದಿರುವುದಕ್ಕೆ ಕಾರಣ ಆಕೆ 12 ವರ್ಷಗಳ ಹಿಂದೆ ಪರಧರ್ಮೀಯನನ್ನು ಪ್ರೀತಿಸಿ, ಮದುವೆ ಆದದ್ದು.

ಪರಧರ್ಮದವನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ 12 ವರ್ಷಗಳ ಕಾಲ ತಂದೆ ಮಗಳೊಂದಿಗೆ ಮಾತು ಬಿಟ್ಟ. ಆದರೆ ಕುಟುಂಬದ ಕೆಲ ಸದಸ್ಯರು ಸಂಪರ್ಕದಲ್ಲಿದ್ದರು. ಅವರ ಮೂಲಕ ತಂದೆ ತಾಯಿಯನ್ನು ಭೇಟಿ ಮಾಡಲು ಆ ಹೆಣ್ಣುಮಗಳು 12 ವರ್ಷ ನಡೆಸಿದ ಪ್ರಯತ್ನವೂ ವಿಫಲ ಆಗಿತ್ತು. ಆದರೆ ಎಂದಿಗೂ ಕೂಡ ತನ್ನ ತವರುಮನೆಯವರಿಗೆ ಯಾವ ತೊಂದರೆಯನ್ನೂ ನೀಡಲಿಲ್ಲ, ತನ್ನ ವೈವಾಹಿಕ ಬದುಕಿನಲ್ಲಿ ಏನೇ ಕಷ್ಟ ಬಂದರೂ ಒಂದು ದಿನ ತಂದೆ ತಾಯಿಗೆ ದೂರು ಹೇಳಲಿಲ್ಲ. ಹೀಗಿರುವಾಗ ಇತ್ತೀಚೆಗೆ ಆ ಹೆಣ್ಣುಮಗಳ ತಂದೆ ಅನಾರೋಗ್ಯಕ್ಕೆ ಈಡಾಗಿ ಆಸ್ಪತ್ರೆ ಸೇರಿದರು. ಕೆಲ ಸಂಬಂಧಿಕರಿಂದ ವಿಷಯ ತಿಳಿದು, ಆಸ್ಪತ್ರೆಗೆ ಭೇಟಿ ನೀಡಲು ಆ ಹೆಣ್ಣುಮಗಳು ಪ್ರಯತ್ನಿಸಿದರೂ ಕುಟುಂಬಸ್ಥರು ಅವಕಾಶ ನೀಡಲಿಲ್ಲ.

ಕೊನೆಗೆ ಇದೇ ಸೋಮವಾರ ಸಂಜೆ ಆ ವ್ಯಕ್ತಿ ನಿಧನರಾದರು. 12 ವರ್ಷಗಳಿಂದ ಮಾತೇ ಆಡದ ಹಡದಪ್ಪನನ್ನು ಕಳೆದುಕೊಂಡ ಆ ಹೆಣ್ಣುಮಗಳು ಕೊನೆಯ ದರ್ಶನವಾದರೂ ಪಡೆಯೋಣವೆಂದು ಗಜೇಂದ್ರಗಡಕ್ಕೆ ಬರಲು ಪತಿಯೊಂದಿಗೆ ಸಜ್ಜಾದಳು. ಆದರೆ ಅಷ್ಟರಲ್ಲಿ ಕುಟುಂಬದ ಸದಸ್ಯರು ಫೋನ್ ಕರೆ ಮಾಡಿ “ನೀವು ಮಣ್ಣಿಗೆ ಬರಬೇಡಿ, ನೀವು ಬಂದರೆ ನಮಗೆ ತೊಂದರೆ ಆಗುತ್ತದೆ, ಅಪ್ಪ ನೀನಿದ್ದಾಗ ನನ್ನ ಮಣ್ಣಿಗೂ ಕರೆಯಬೇಡಿ ಎಂದು ಹೇಳಿದ್ದ, ಹೀಗಾಗಿ ಬರಬೇಡಿ, ಬಂದರೆ ತೊಂದರೆ ಆಗುತ್ತದೆ, ಜಗಳ ಆಗುತ್ತದೆ, ನೀನು 12 ವರ್ಷಗಳ ಹಿಂದೆ ನಮ್ಮ ಪಾಲಿಗೆ ಇಲ್ಲ ಅಂತ ಅಂದ್ಕೊಂಡಿದ್ದೇವೆ” ಎಂದು ಆ ಹೆಣ್ಣುಮಗಳ ಸೋದರ ರಂಪ ಮಾಡಿದ್ದಾನೆ.

ದೂರದಿಂದ ನಿಂತು ತನ್ನ ತಂದೆಯ ಮೃತದೇಹ ನೋಡಲು ಅವಕಾಶ ನೀಡಿ ಎಂದು ಗೋಗರೆದು ಆ ಹೆಣ್ಣುಮಗಳು ಅಂಗಲಾಚಿದರೂ ಕೂಡ ಕಲ್ಲು ಹೃದಯಗಳು ಕರಗಿಲ್ಲ.

ಗಜೇಂದ್ರಗಡದಲ್ಲೇ ಇರುವ ಆ ಹೆಣ್ಣುಮಗಳ ಪತಿಯ ಸೋದರ ಆ ಸಮುದಾಯದ ಮುಖಂಡರಿಗೆ ಭೇಟಿ ಆಗಿ, ಅಂತಿಮ ದರ್ಶನಕ್ಕೆ ಅವಕಾಶ ನೀಡಿ ಎಂದು ಕೇಳಿದ್ದಾರೆ. ಚರ್ಚೆ ಮಾಡಿ ಹೇಳುವುದಾಗಿ ಮುಖಂಡರು ತಿಳಿಸಿದ್ದಾರೆ. ಆದರೆ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆ ಹೆಣ್ಣುಮಗಳ ಪತಿ ಕೂಡ ಕುಟುಂಬದ ಸದಸ್ಯರಿಗೆ ಫೋನ್ ಮಾಡಿ ತನ್ನ ಪತ್ನಿಗೆ ಇದೊಂದು ಅವಕಾಶ ನೀಡಿ ಎಂದು ಕೇಳಿದ್ದಾನೆ. ಆದರೆ ಅವಕಾಶ ನೀಡಲೇ ಇಲ್ಲ.

ಕೊನೆಗೆ ಮಂಗಳವಾರ ಮಧ್ಯಾಹ್ನ ಆ ವ್ಯಕ್ತಿಯ ಅಂತಿಮ ಸಂಸ್ಕಾರ ಪೂರ್ಣಗೊಂಡಿದೆ. ತನ್ನ ತಂದೆಯನ್ನು ನೆನೆದು ಆ ಹೆಣ್ಣುಮಗಳು ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವು ಹಂಚಿಕೊಂಡಿದ್ದಾರೆ.

ಈ ನಿರಾಕರಣೆಗೆ, ಈ ದ್ವೇಷಕ್ಕೆ ಪರಧರ್ಮದ ವ್ಯಕ್ತಿಯನ್ನು ಪ್ರೀತಿಸಿ ಮದುವೆ ಆದದ್ದೇ ಕಾರಣ. ಗಜೇಂದ್ರಗಡ ಸೌಹಾರ್ದತೆಗೆ ಹೆಸರಾದ ಊರು. ಇಲ್ಲಿನ ಶರಣ, ಸೂಫಿ ಪರಂಪರೆ ಇಡೀ ಜಿಲ್ಲೆಗೆ ಮಾದರಿ. ಎಲ್ಲ ಸಮುದಾಯ, ಧರ್ಮ ಜಾತಿಗಳ ಜನರು ಭಾತೃತ್ವದಿಂದಲೇ ಬದುಕುತ್ತಿದ್ದಾರೆ. ಆದರೆ ಇಂತಹ ಹೆಸರು ಮಾಡಿದ ಪಟ್ಟಣದಲ್ಲೇ ಇಂತಹ ಅಮಾನವೀಯ ಘಟನೆ ನಡೆದಿರುವುದು ಖಂಡನೀಯ ಎಂದು ಪ್ರಜ್ಞಾವಂತರು ಅಭಿಪ್ರಾಯ ಪಟ್ಟಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Related Posts

LEAVE A REPLY

Please enter your comment!
Please enter your name here

Stay Connected

0FansLike
3,790FollowersFollow
0SubscribersSubscribe
- Advertisement -spot_img

Latest Posts