27.3 C
Gadag
Wednesday, June 7, 2023

ಗದುಗಿನ ಗದ್ದುಗೆಗಾಗಿ ಕೈ-ಕಮಲ ಗುದ್ದಾಟ: ಅಧ್ಯಕ್ಷ, ಉಪಾಧ್ಯಕ್ಷ ಕುರ್ಚಿಗಾಗಿ ಬಿಗ್ ಫೈಟ್!

Spread the love

ಹೊಂಬಳ, ಅಂತೂರ- ಬೆಂತೂರ ಬಿಜೆಪಿ ಬೆಂಬಲಿಗರ ತೆಕ್ಕೆಗೆ?
ಸಮಬಲ ಸಾಧಿಸಿರುವ ಬಿಂಕದಕಟ್ಟಿ ಮೇಲೆ ಕೈ-ಕಮಲ ಕಣ್ಣು

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ನಾಲ್ಕು ತಾಲ್ಲೂಕುಗಳ 55 ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ಆಕಾಂಕ್ಷಿಗಳ ಸಂಖ್ಯೆ ಹಿರಿದಾಗಿದೆ.
ಮೀಸಲಾತಿಯ ಮೇಲೆ ಕಣ್ಣಿಟ್ಟಿದ್ದ ಗದಗ, ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ಗ್ರಾ.ಪಂ. ಸದಸ್ಯರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರೂ ಅಧಿಕಾರಕ್ಕಾಗಿ ರಾಜಕೀಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸದಸ್ಯರ ಮಧ್ಯೆ ಅಧಿಕಾರಕ್ಕಾಗಿ ತಿಕ್ಕಾಟವೂ ನಡೆದಿದೆ.

ಕಾಂಗ್ರೆಸ್, ಬಿಜೆಪಿಗಳು ತಮ್ಮ ಪಕ್ಷದ ಬೆಂಬಲಿತ ಸದಸ್ಯರನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸಿದ್ದಾರೆ. ಇದಕ್ಕಾಗಿ ಸದಸ್ಯರೊಂದಿಗ ಸಾಲು ಸಾಲು ಸಭೆ ನಡೆಸಿ, ಅಭಿಪ್ರಾಯ ಕಲೆ ಹಾಕುತ್ತಿದ್ದಾರೆ.

ಹೊಂಬಳ ಗ್ರಾಪಂ ಬಿಜೆಪಿ ಬೆಂಬಲಿಗರ ತೆಕ್ಕೆಗೆ?

ಹೊಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸರಸ್ವತಿ ಬಸವರಾಜ ಬಳ್ಳಾರಿ ಮಾತ್ರ ಗೆಲುವು ಸಾಧಿಸಿದ್ದಾರೆ. ಈ ಪಂಚಾಯತಿಗೆ ಎಸ್.ಟಿ. ಮೀಸಲಾತಿ ಸಿಕ್ಕಿದ್ದು, ಹೊಂಬಳದಲ್ಲಿ ಬಹುತೇಕ ಬಿಜೆಪಿಗೆ ಅಧಿಕಾರ ಸಿಗಲಿದೆ. ಅಂತೂರ-ಬೆಂತೂರ ಗ್ರಾ.ಪಂ.ನ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಯಲ್ಲವ್ವ ದುರಗಪ್ಪ ಹೊಸಮನಿ ಜಯಭೇರಿ ಬಾರಿಸಿದ್ದು, ಪಂಚಾಯತಿಗೆ ಎಸ್ಸಿ ಮಹಿಳಾ ಮೀಸಲಾತಿಯೂ ಬಂದಿದೆ. ಈ ಗ್ರಾ.ಪಂ. ಕಮಲದ ಪಾಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾದಲ್ಲಿ ಗದಗ ತಾಲ್ಲೂಕಿನ 2 ಗ್ರಾ.ಪಂ.ಗಳಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಂತಾಗಲಿದೆ.

ಗ್ರಾ.ಪಂ. ಸದಸ್ಯರ ಲೆಕ್ಕಾಚಾರ:
ಗ್ರಾ.ಪಂ. ಸದಸ್ಯರು ತಮ್ಮ ಬೆಂಬಲಿಗರೊಂದಿಗೆ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಅಧ್ಯಕ್ಷ ಪಟ್ಟ ಕೊಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಬಹುಮತ ತೋರಿಸಲು ರಣತಂತ್ರ ಹೆಣೆಯುತ್ತಿದ್ದಾರೆ.
ಮೀಸಲಾತಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಧ್ಯಕ್ಷ ಸ್ಥಾನ ಕೊಡಲೇಬೇಕೆಂದು ಸದಸ್ಯರು ನಾಯಕರ ಹಿಂದೆ ದುಂಬಾಲು ಬಿದ್ದಿದ್ದಾರೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿರುವುದರಿಂದ ಸದಸ್ಯರಲ್ಲಿ ಅಸಮಾಧಾನ ಉಂಟಾಗದಂತೆ ನೋಡಿಕೊಳ್ಳಲು 50-50 ಅಧಿಕಾರ ಹಂಚಿಕೆ ಸೂತ್ರಕ್ಕೂ ಮುಂದಾಗಿದ್ದಾರೆ.

ಟೊಂಕಕಟ್ಟಿ ನಿಂತ ಕೈ-ಕಮಲ:
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಗದಗ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಪರಾಜಿತಗೊಂಡಿತ್ತು. ಹಾಗಾಗಿ ಪಕ್ಷ ಬಲವರ್ಧನೆಗೆ ಕಮಲ ನಾಯಕರು ಟೊಂಕಕಟ್ಟಿ ನಿಂತಿದ್ದಾರೆ. ಮತ್ತೊಂಡೆದೆ, ಕಾಂಗ್ರೆಸ್ ನಾಯಕರು ಕ್ಷೇತ್ರ ತಮ್ಮ ಕೈ ತಪ್ಪಿ ಹೋಗಬಾರದೆಂದು ಪಣ ತೊಟ್ಟಿದ್ದಾರೆ. ಹಾಗಾಗಿ, ಗದಗ ತಾಲ್ಲೂಕಿನ ಮೀಸಲಾತಿ ಪಟ್ಟಿ ಸೋಮವಾರ ಪ್ರಕಟವಾಗುತ್ತಿದ್ದಂತೆ, ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸದಸ್ಯರ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಂಕದಕಟ್ಟಿ ಮೇಲೆ ಬಿಜೆಪಿ ಕಣ್ಣು

ಈ ಹಿಂದೆ ಕಾಂಗ್ರೆಸ್ ಪ್ರಬಲವಾಗಿದ್ದ ಬಿಂಕದಕಟ್ಟಿ ಗ್ರಾಮದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದೆ.14 ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಶ್ರೀನಿವಾಸ್ ತಮ್ಮನಗೌಡ್ರ ಅವರ ಧರ್ಮಪತ್ನಿ ಅಧ್ಯಕ್ಷ ಪಟ್ಟಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷ ಗಾದಿಗೆ ಡಿ.ಬಿ. ಕರಿಗೌಡ್ರ ಲಾಬಿ ನಡೆಸಿದ್ದಾರೆ. ಸಮಬಲ ಸಾಧಿಸಿರುವುದರಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಕಮಲದತ್ತ ಸೆಳೆಯಲು ನಾಯಕರು ತೆರೆಮರೆಯ ಕಸರತ್ತು ನಡೆಸಿದ್ದಾರೆ. ಆಪರೇಷನ್ ಕಮಲಕ್ಕೆ ತುತ್ತಾಗದಂತೆ ಕಾಂಗ್ರೆಸ್ ನಾಯಕರು ತಮ್ಮ ಸದಸ್ಯರನ್ನು ಹಿಡಿದಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕುದುರೆ ವ್ಯಾಪಾರ ಜೋರು?

ಆಡಳಿತ ರಚಿಸುವಲ್ಲಿ ಪಕ್ಷೇತರ ಸದಸ್ಯರು ಪ್ರಮುಖ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಅಂತಹ ಸದಸ್ಯರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಸದಸ್ಯ ಬಲ ಹೆಚ್ಚಿಸಿಕೊಳ್ಳಲು ಹಾಗೂ ತಮ್ಮ ಸದಸ್ಯರನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ರೆಸಾರ್ಟ್ ನತ್ತ ಮೊರೆ ಹೋಗಿದ್ದಾರೆ. ಅಲ್ಲದೇ, ತಮ್ಮ ಸದಸ್ಯರನ್ನು ಗೋವಾ ಮತ್ತು ಧರ್ಮಸ್ಥಳದತ್ತ ಕರೆದೊಯ್ಯುವ ಯೋಜನೆ ರೂಪಿಸುತ್ತಿದ್ದಾರೆ. ಆಸೆ, ಆಮಿಷಗಳಿಗೆ ಒಳಗಾಗದಂತೆ ನೋಡಿಕೊಳ್ಳಲು ಕೆಲವು ಸದಸ್ಯರನ್ನು ರೆಸಾರ್ಟ್‌ಗಳಲ್ಲಿ ಕೂಡಿ ಹಾಕಿದ್ದಾರೆ. ಕುದುರೆ ವ್ಯಾಪಾರವೂ ಜೋರಾಗಿದೆ.

ಕಾಂಗ್ರೆಸ್ ದುರಾಡಳಿತದಿಂದ ಜನರು ಬೇಸತ್ತಿದ್ದು, ಬಿಜೆಪಿಯತ್ತ ಹೆಚ್ಚು ಒಲವು ತೋರಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ.

ಅನಿಲ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡರು

ಜಿಲ್ಲೆಯ 117 ಗ್ರಾ.ಪಂ.ಗಳ ಪೈಕಿ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲಿದ್ದು, ಶೇ. 75 ಗ್ರಾ.ಪಂ.ಗಳು ಕಾಂಗ್ರೆಸ್ ಪಕ್ಷದ ಪಾಲಾಗಲಿವೆ.

ಜಿ ಎಸ್ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ

Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Posts