HomeCrime Newsಉತ್ಸವದಂದೇ ಕಪ್ಪತಗುಡ್ಡಕ್ಕೆ ಬೆಂಕಿ: ಅಪಾರ ಸಸ್ಯ ಸಂಪತ್ತು ನಾಶ

ಉತ್ಸವದಂದೇ ಕಪ್ಪತಗುಡ್ಡಕ್ಕೆ ಬೆಂಕಿ: ಅಪಾರ ಸಸ್ಯ ಸಂಪತ್ತು ನಾಶ

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಭಾನುವಾರದಂದು (ಜ.24) ಗದಗ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅರಣ್ಯ ಇಲಾಖೆ ಕಪ್ಪತ ಉತ್ಸವ-2021 ನಡೆಸುತ್ತಿತ್ತು. ಮತ್ತೊಂದೆಡೆ ಅಂದೇ ಮುಂಡರಗಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದದ್ದು ವಿಪರ್ಯಾಸ.

ಸೋಮವಾರವೂ ಅಗ್ನಿದೇವನ ಅಟ್ಟಹಾಸ ಮುಂದುವರೆದಿದೆ. ಡೋಣಿ ಮತ್ತು ಡಂಬಳ ಗ್ರಾಮದ ಮಧ್ಯೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ನೆಡುತೋಪು ಬೆಂಕಿ ಬಿದ್ದು ಭಾಗಶಃ ಸುಟ್ಟು ಹೋಗಿದೆ. ಬೆಳಗ್ಗೆ 11 ಗಂಟೆಗೆ ಹೊತ್ತಿಕೊಂಡ ಬೆಂಕಿ ರಾತ್ರಿ 8 ಗಂಟೆಯವರೆಗೂ ಕಾವಲುಗಾರರು ಬೆಂಕಿ ನಂದಿಸಿದ್ದಾರೆ. ಅದರಂತೆ ಶನಿವಾರ ಹಿರೇವಡ್ಡಟ್ಟಿ ಭಾಗದಲ್ಲಿ ಬೆಂಕಿ ಬಿದ್ದಿತ್ತು ಎಂದು ಮೂಲಗಳು ತಿಳಿಸಿವೆ.

ಕಪ್ಪತಗುಡ್ಡದ ಸೆರಗಂಚಿನ ಡಂಬಳ, ಹಿರೇವಡ್ಡಟ್ಟಿ ಚಿಕ್ಕವಡ್ಡಟ್ಟಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಬೆಂಕಿ ಬಿದ್ದು ಅಪಾರ ಪ್ರಮಾಣದ ಔಷಧಿ ಸಸ್ಯಗಳು ಸುಟ್ಟು ಕರಕಲಾಗಿವೆ. ಸೋಮವಾರ ರಾತ್ರಿ 8 ಗಂಟೆವರೆಗೆ ಬೆಂಕಿ ಹೊತ್ತಿ ಉರಿಯುತ್ತಿರುವದು ದಾರಿ ಹೋಕರಿಗೆ ಕಾಣಿಸಿದೆ. ಇದರಿಂದ ಬೇಸಿಗೆ ಆರಂಭಕ್ಕೂ ಮುನ್ನವೇ ಕಪ್ಪತ್ತಗುಡ್ಡಕ್ಕೆ ಬೆಂಕಿ ಕಾಟ ಶುರುವಾಗಿರುವುದು ಆಘಾತವನ್ನುಂಟು ಮಾಡಿದೆ.

ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದ ಬಗ್ಗೆ ವಿಜಯಸಾಕ್ಷಿಗೆ ಗೊತ್ತಾಗುತ್ತಿದ್ದಂತೆಯೇ ಮಾಹಿತಿಗಾಗಿ ಗದಗ ಉಪ ಅರಣ್ಯ ಸಂರಕ್ಷಾಧಿಕಾರಿ ಸೂರ್ಯಸೇನಾ ಅವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಡಿಎಫ್‌ಒ ಅವರ ಉತ್ತರ ಮಾತ್ರ ಅಚ್ಚರಿ ಮೂಡಿಸುವ ರೀತಿಯಲ್ಲಿ ಇತ್ತು.

ಬೆಂಕಿ ಬಿದ್ದಿದೆ ಎಂದು ನಿಮಗೆ ಯಾರು ಹೇಳುತ್ತಿದ್ದಾರೆ? ಫೋಟೋ ಸಿಕ್ಕರೆ ಹಂಚಿಕೊಳ್ಳಿ. ನಮಗೆ ಸ್ಯಾಟ್‌ಲೈಟ್ ಮೂಲಕ ಅಥವಾ ನಮ್ಮ ಸಿಬ್ಬಂದಿಯಿಂದಲೂ ಮಾಹಿತಿ ಬಂದಿಲ್ಲ. ನಿಮಗೆ ಯಾರು ಮಾಹಿತಿ ಕೊಡುತ್ತಿದ್ದಾರೋ ಅವರೇ ಬೆಂಕಿ ಹಚ್ಚುತ್ತಿದ್ದಾರೆ ಎಂಬುವುದು ನಮಗೆ ಗೊತ್ತಾಗುತ್ತಿದೆ ಎಂದರು.

ವಿಜಯಸಾಕ್ಷಿ ಪತ್ರಿಕೆಯ ಸುದ್ದಿಯ ಮೇಲೆ ಆಗಾಗ ನಿಗಾವಹಿಸುತ್ತಿದ್ದು, ನಿಮಗೆ ಯಾರು ಮಾಹಿತಿ ಕೊಡುತ್ತಿದ್ದಾರೆಯೋ ಅವರ ಮೇಲೂ ನಿಗಾವಹಿಸುತ್ತಿದ್ದೇವೆ. ಸಿಡಿಯ ಡೇಟಾ ತೆಗೆಯುತ್ತಿದ್ದೇವೆ. ಬೇಗನೆ ಅವರು ಯಾರೆಂದು ಗುರುತಿಸಿ ಹಿಡಿಯುತ್ತೇವೆ. ಅದರಲ್ಲಿ ಎರಡು ಮಾತಿಲ್ಲ. ಈ ರೀತಿಯ ಸುಳ್ಳು ಮಾಹಿತಿ ಕೊಡಬಾರದು. ನಮ್ಮ ಹತ್ತಿರ ಎಲ್ಲಾ ಮಾಹಿತಿ ಇದೆ. ಸ್ಯಾಟ್‌ಲೈಟ್ ಮೂಲಕ ನಮಗೆ ಎಚ್ಚರಿಕೆ ಬರುತ್ತದೆ. ಇವತ್ತು (ಸೋಮವಾರ) ಬೆಂಕಿ ಬಿದ್ದಿದೆ. ಆದರೆ, ಡಂಬಳ, ಹಿರೇವಡ್ಡಟ್ಟಿಯಲ್ಲಿ ಅಲ್ಲ. ಡೋಣಿ ಪಶ್ಚಿಮದಲ್ಲಿ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲಾಗಿದೆ. ಯಾರು ಹಚ್ಚಿದ್ದಾರಂತೆಯೂ ಗೊತ್ತಾಗುತ್ತಿದೆ ಎಂದ ಡಿಎಫ್ಒ ಅವರು, ಪತ್ರಿಕೆಯ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ ಎಂಬುದನ್ನು ನೇರವಾಗಿ ಹೇಳಿದ್ದಾರೆ.

ಬೆಂಕಿ ಹಚ್ಚಿದವರ ವಿರುದ್ಧ ಕ್ರಮ ಕೈಗೊಳ್ಳಬಹುದಲ್ಲಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ಸಾಕ್ಷಿ ಬೇಕು. ಅರಣ್ಯದಲ್ಲಿ ಇವರೇ ಹಚ್ಚಿದ್ದಾರೆಂಬ ಮಾಹಿತಿ ಸಿಗುವುದಿಲ್ಲ. ನೀವು ನಮಗೆ ಸಹಾಯ ಮಾಡಬೇಕು. ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು. ಆದರೆ, ಎರಡೂ ಕಡೆ ಮಾಡಬೇಕು. ತಪ್ಪು ಮಾಡಿದವರನ್ನು ಬೆಳೆಸಬಾರದು. ನೀವು ಯಾರ ಕಡೆಯಿಂದ ಮಾಹಿತಿ ತೆಗದುಕೊಂಡಿದ್ದಿರಲ್ಲಾ ಅವರೇ ಮೂರ್ನಾಲ್ಕು ವರ್ಷದಿಂದ ಆ ಜಾಗದಲ್ಲಿ ಬೆಳೆಯುತ್ತಾ ಬರುತ್ತಿದ್ದಾರೆ ಎಂದು ಹೇಳಿದರು. ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದಿದೆ ಎಂದು ಜನರು ಮಾಧ್ಯಮಕ್ಕೆ ಮಾಹಿತಿ ನೀಡುವುದು ತಪ್ಪೇ? ಎಂಬ ಪ್ರಶ್ನೆ ಪರಿಸರವಾದಿಗಳಲ್ಲಿ ಮೂಡಿದೆ. ಇನ್ನೊಂದೆಡೆ, ಮಾಹಿತಿದಾರರ ಮೇಲೆ ಅರಣ್ಯ ಇಲಾಖೆ ಕಣ್ಗಾವಲಿರಿಸಿದೆ ಎನ್ನುವ ರೀತಿಯಲ್ಲಿ ಬೆದರಿಕೆ ತಂತ್ರ ಅನುಸರಿಸುತ್ತಿದೆಯಾ ಎಂಬ ಪ್ರಶ್ನೆ ಈ ಮೇಲಿನ ಹೇಳಿಕೆ ಗಮನಿಸಿದಾಗ ಮೂಡುತ್ತದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!