ಬೆಂಗಳೂರು: ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಪ್ರಕರಣದ ವಿಚಾರಣೆಗೆ ಒಂದು ವರ್ಷದ ಗಡುವು ನೀಡಿದೆ. ಆ ಅವಧಿಯೊಳಗೆ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳ್ಳದಿದ್ದರೆ ಮಾತ್ರ ಜಾಮೀನು ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದರ್ಶನ್, ಜೈಲಿನಲ್ಲಿನ ಕಿರುಕುಳ, ಆರೋಗ್ಯ ಸಮಸ್ಯೆ ಹಾಗೂ ಪ್ರಕರಣದ ವಿಚಾರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ದರ್ಶನ್ ಪರ ವಾದ ಮಂಡಿಸಿದ ಮುಕುಲ್ ರೋಹಟಗಿ, “272 ಸಾಕ್ಷಿಗಳ ಪೈಕಿ ಕೇವಲ 10 ಮಂದಿಯ ವಿಚಾರಣೆ ಮಾತ್ರ ನಡೆದಿದೆ. ಈ ವೇಗದಲ್ಲಿ ವಿಚಾರಣೆ ಮುಗಿಯುವುದು ಅಸಾಧ್ಯ” ಎಂದು ಹೇಳಿದರು.
ಇದಕ್ಕೆ ಪ್ರತಿಯಾಗಿ ವಾದಿಸಿದ ಸಿದ್ಧಾರ್ಥ್ ಲೂತ್ರಾ, “ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಯತ್ನ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
ನ್ಯಾಯಮೂರ್ತಿಗಳು ಪ್ರಕರಣದ ಗಂಭೀರತೆ ಗಮನಿಸಿ, “ಒಂದು ವರ್ಷದೊಳಗೆ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು. ನಂತರ ದರ್ಶನ್ ವಿಚಾರಣಾ ನ್ಯಾಯಾಲಯದಲ್ಲೇ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು” ಎಂದು ಸೂಚಿಸಿದರು. ಈ ಆದೇಶದಿಂದ ದರ್ಶನ್ ಇನ್ನೂ ಕನಿಷ್ಠ ಒಂದು ವರ್ಷ ಜೈಲಿನಲ್ಲೇ ಇರಬೇಕಾಗುವ ಸಾಧ್ಯತೆ ಹೆಚ್ಚಾಗಿದೆ.



