34.4 C
Gadag
Tuesday, March 28, 2023

ಗ್ರಾಪಂ ಚುನಾವಣಾ ಮತದಾನ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

Spread the love

-ರಸ್ತೆ ಮಾಡಿ‌ ಕೊಡಿ, ಆಮೇಲೆ ಓಟ್ ಕೇಳೋಕೆ ಬನ್ನಿ..
-ರಸ್ತೆ ಇಲ್ಲದ ಕಾರಣಕ್ಕೆ ಅನೇಕರು ಅಸು‌ ನೀಗಿದ್ದಾರೆ
-ಬಿಯಸ್ಕೆ
ವಿನಯಸಾಕ್ಷಿ ಸುದ್ದಿ ಕೊಪ್ಪಳ
2020-21ನೇ ಸಾಲಿನಲ್ಲಿ ನಡೆಯಲಿರುವ ರಾಜ್ಯದ ಗ್ರಾಪಂ ಚುನಾವಣೆಗಳಿಗೆ ಈಗಾಗಲೇ ಆಕಾಂಕ್ಷಿಗಳು ತಯಾರಿ ನಡೆಸಿದ್ದಾರೆ. ಮತದಾರರ ಮನಸೆಳೆಯಲು ಈಗಾಗಲೇ ತಂತ್ರಗಾರಿಕೆ ಆರಂಭಿಸಿದ್ದಾರೆ. ಆದರೆ ಹಣವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳಧಾಳ ಗ್ರಾಮಸ್ಥರು ಗ್ರಾಪಂ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವ ನಿರ್ಧಾರ ಮಾಡಿದ್ದಾರೆ.
ಗುಳಧಾಳ (ಮಸಾರಿ ಕ್ಯಾಂಪ್), ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಣವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿ. ಸುಮಾರು 150 ವರ್ಷಗಳಿಂದಲೂ 200 ಕುಟುಂಬಗಳು ಅಂದರೆ ಸುಮಾರು 800 ಜನರು ವಾಸವಾಗಿದ್ದಾರೆ. ಇಷ್ಟು ವರ್ಷಗಳಿಂದಲೂ ಗ್ರಾಮಕ್ಕೆ ರಸ್ತೆ ಮಾಡಿಸಿಕೊಡಿ ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ.‌ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿ ಸುಸ್ತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಗುಳಧಾಳ (ಮಸಾರಿ ಕ್ಯಾಂಪ್) ಗ್ರಾಮಕ್ಕೆ ಮುಖ್ಯವಾಗಿ ರಸ್ತೆ‌ ನಿರ್ಮಿಸಬೇಕು. ಹತ್ತಾರು ವರ್ಷಗಳಿಂದ ನಡೆಯುತ್ತಿರುವ ವಿವಿಧ ಚುನಾವಣೆಗಳಲ್ಲಿ ಗ್ರಾಮಸ್ಥರು ಈ ಬೇಡಿಕೆಯನ್ನು ಹೇಳುತ್ತಲೇ ಬಂದಿದ್ದಾರೆ. ಮತ ಕೇಳಲು ಬಂದವರೆಲ್ಲ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಾರೆಯೇ ಹೊರತು ಗೆದ್ದವರು ತಿರುಗಿ ಗ್ರಾಮದ ಕಡೆ ಸುಳಿಯುವುದೇ ಇಲ್ಲ.
ಗ್ರಾಮಕ್ಕೆ ರಸ್ತೆ‌‌ ಇಲ್ಲದ್ದರಿಂದ ಅನಾರೋಗ್ಯ ಉಂಟಾದರೆ ಪಟ್ಟಣಕ್ಕೆ ತೆರಳಲು ಕಷ್ಟವಾಗುತ್ತದೆ. ರಸ್ತೆಯೇ ಇಲ್ಲ ಎಂದ ಮೇಲೆ ವಾಹನ ಸಂಚಾರ ಎಲ್ಲಿಯದು? ಕಾಲುವೆ ಪಕ್ಕದ ಅಡ್ಡಾದಿಡ್ಡಿ ಹಾದಿಯಲ್ಲಿ ಬೈಕ್‌ಗಳು ಓಡಾಡುತ್ತವೆ. ರಾತ್ರಿಯಾದರೆ ಸಾಕು ವಿದ್ಯುತ್ ದೀಪಗಳಿಲ್ಲದೇ ಅನೇಕ ಅಪಘಾತಗಳು ಸಂಭವಿಸಿ ಸಾವು-ನೋವಿನ ಪ್ರಕರಣಗಳು ಉಂಟಾಗಿವೆ. ಅನಾರೋಗ್ಯಪೀಡಿತರು ಆಸ್ಪತ್ರೆ ಸೇರುವ ಮೊದಲೇ ಈ ಹಾದಿಯ ಕಾರಣದಿಂದ ಮಸಣದ ದಾರಿ ಹಿಡಿದಿರುವ ಅನೇಕ ಪ್ರಸಂಗಗಳು ನಡೆದಿವೆ.
ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರೆ ರಸ್ತೆ. ಗ್ರಾಮಕ್ಕೆ ರಸ್ತೆ ಆಗುವವರೆಗೆ ಯಾವುದೇ ಚುನಾವಣೆ ಬರಲಿ. ಮತದಾನ ಮಾಡದಿರಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ನಡೆಯಲಿರುವ ಗ್ರಾಮ ಪಂಚಾಯಿತಿ‌ ಚುನಾವಣೆ ಗ್ರಾಮಸ್ಥರ ಮೊದಲ ಹೆಜ್ಜೆ.
ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಬಹಿಷ್ಕಾರದ ಪತ್ರವನ್ನು ಈಗಾಗಲೇ ಹಣವಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಈ ಸಲ ಹುಸಿ ಭರವಸೆಗಳಿಗೆ ಮರಳಾಗುವುದಿಲ್ಲ ಎಂಬುದು ಗ್ರಾಮಸ್ಥರ ನಿಲುವು.

ನಮ್ಮೂರಿಗೆ ರಸ್ತೆ‌ ಇಲ್ಲದ್ದರಿಂದ ಇಲ್ಲಿನ ವಿದ್ಯಾರ್ಥಿಗಳು ಸುಮಾರು 5 ಕಿಮೀ ನಡೆದುಕೊಂಡೇ ಶಾಲಾ-ಕಾಲೇಜುಗಳಿಗೆ ತೆರಳಬೇಕು. ಸಂಜೆ 6ರೊಳಗೆ ಗ್ರಾಮಸ್ಥರು ಮನೆ ಸೇರಬೇಕು. ಯಾಕೆಂದರೆ ವಿದ್ಯುತ್ ದೀಪ ಇಲ್ಲದ್ದರಿಂದ ಕತ್ತಲಿನಲ್ಲಿ ಕಾಲುವೆಗೆ ಜಾರುವ ಸ್ಥಿತಿ ಇದೆ. ಗ್ರಾಮದ ಯುವಕರಿಗೆ ಇದೇ ಕಾರಣಕ್ಕಾಗಿ ಕನ್ಯೆ ಸಿಗುತ್ತಿಲ್ಲ. ಹೆಣ್ಣು ನೋಡಲು ವರ ಬರುತ್ತಿಲ್ಲ. ರಸ್ತೆ‌ ನಿರ್ಮಾಣದ ನಂತರವೇ ಮತದಾನ ಮಾಡಲು ನಿರ್ಧರಿಸಿದ್ದೇವೆ.
-ಮಂಜುನಾಥ್, ಗುಳಧಾಳ ಗ್ರಾಮಸ್ಥ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,749FollowersFollow
0SubscribersSubscribe
- Advertisement -spot_img

Latest Posts

error: Content is protected !!