ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲಾದ್ಯಂತ ನಿನ್ನೆ ತಡರಾತ್ರಿಯಿಂದ ಸುರಿದ ಭಾರಿ ಮಳೆ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ.
ಮುಂಡರಗಿ ಭಾಗದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲೆಲ್ಲಾ ನೀರು ತುಂಬಿ ಹರಿದು ಕೆರೆಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ರಸ್ತೆ ದಾಟಲು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಮಳೆಯಿಂದಾಗಿ ಅನೇಕ ಮಣ್ಣಿನ ಮನೆಗಳು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದ್ರಹಳ್ಳಿಯಲ್ಲಿ ತಗ್ಗು ಪ್ರದೇಶದ ಸುಮಾರು 25 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ರಾತ್ರಿಯಿಡೀ ನೀರು ಹೊರಹಾಕಲು ಗ್ರಾಮಸ್ಥರು ಪರದಾಡಿದರು.

ಇನ್ನು ಮನೆಯಲ್ಲಿನ ವಸ್ತುಗಳು ಸೇರಿದಂತೆ ದವಸ ಧಾನ್ಯಗಳು ನೀರು ಪಾಲಾಗಿವೆ.
ರೋಣ ತಾಲೂಕಿನ ಮೆಣಸಗಿಯಲ್ಲಿ ಮಳೆಯಿಂದಾಗಿ ಕೆಎಸ್ಆರ್ಟಿಸಿ ಬಸ್ ಮಣ್ಣಿನಲ್ಲಿ ಸಿಲುಕಿಕೊಂಡಿತು. ಇದರಿಂದ ಪ್ರಯಾಣಿಕರು ಪರದಾಡಿದ ಘಟನೆಯೂ ನಡೆಯಿತು.
ಮಳೆಯಿಂದ ಹಾಳಾದ ರಸ್ತೆಯನ್ನು ತಾತ್ಕಾಲಿಕವಾಗಿಯಾದರೂ ರಿಪೇರಿ ಮಾಡದ ಜಿಲ್ಲಾಡಳಿತದ ವಿರುದ್ಧ ಜನ್ರು ಹಿಡಿಶಾಪ ಹಾಕಿದರು. ಒಟ್ಟಾರೆ ತಡರಾತ್ರಿಯಿಂದ ಆರಂಭವಾದ ವರುಣನ ಅಟ್ಟಹಾಸಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.