ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಲ್ಲಿ ಸಾರಿಗೆ ನೌಕರರು, ಕಾರ್ಮಿಕ ಸಂಘಟಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಜಿಲ್ಲೆಯಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಪರವಾನಿಗೆ ನೀಡಿಲ್ಲ. ನಾಳೆಯಿಂದ ಪರವಾನಿಗೆ ಕೊಡಲಿ ಕೊಡದಿರಲಿ ಉಪವಾಸ ಸತ್ಯಾಗ್ರಹ ಮಾಡೇ ಮಾಡ್ತೀವಿ. ಬೇಡಿಕೆ ಇಡೇರುವರೆಗೂ ಹೋರಾಟ ಹಿಂಪಡೆಯೋದಿಲ್ಲವೆಂದು ತಿಳಿಸಿದರು.
ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಮಾತುಕತೆ ನಡೆಸಲು ಸಾರಿಗೆ ಸಚಿವರು ಜಿದ್ದಿಗೆ ಬಿದ್ದಿದ್ದಾರೆ. ಅವರನ್ನು ಕರೆಯದಿರುವ ಉದ್ದೇಶ ಗೊತ್ತಾಗುತ್ತಿಲ್ಲ. ಖಾಸಗಿ ವಾಹನಗಳನ್ನು ರಸ್ತೆಗಿಳಿಸುವ ಸರ್ಕಾರದ ಯತ್ನ ವಿಫಲವಾಗಿದೆ ಎಂದರು.
ರಾಜ್ಯದಲ್ಲೆಲ್ಲೂ ಖಾಸಗಿ ವಾಹನಗಳು ಓಡಾಡುವುದಿಲ್ಲ. ಖಾಸಗಿ ವಾಹನ ಸಿಬ್ಬಂದಿಗಳು ಸಹೋದರರಿದ್ದಂತೆ. ನಮ್ಮ ಕಷ್ಟ-ನಷ್ಟಗಳು ಖಾಸಗಿಯವರಿಗೂ ಚೆನ್ನಾಗಿ ಗೊತ್ತಿದೆ. ಹಾಗಾಗಿ ಅವರು ಖಂಡಿತ ಬರುವುದಿಲ್ಲ ಎಂದ ಸಾರಿಗೆ ನೌಕರರು, ನಮ್ಮ ಮೇಲೆ ಎಸ್ಮಾ ಆದರೂ ಜಾರಿ ಮಾಡಲಿ, ಜೈಲಿಗಾದ್ರೂ ಹಾಕಲಿ ಯಾವುದೇ ಕಾರಣಕ್ಕೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಸರ್ಕಾರ ಯಾವುದೇ ಅಸ್ತ್ರ ಪ್ರಯೋಗಿಸಿದರು ಎದುರಿಸಲು ಸಿದ್ಧವಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆ ಎಸ್ ಆರ್ ಟಿಸಿ ನೌಕರ ಎಸ್.ಕೆ.ಅಯ್ಯನಗೌಡರ ಆಕ್ರೋಶ ಹೊರ ಹಾಕಿದರು.