ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ
ಬದುಕಿನ ಪಯಣದಲ್ಲಿ ಮುಂದ್ಮೂಂದೆ ಹೋದಂತೆ ಕೆಲವೊಂದಿಷ್ಟು ಅವಮಾನ, ಹಿಂಜರಿಕೆ, ತಾಪತ್ರಯ.., ಯಾಕೀ ಹೋರಾಟ? ಪ್ರತಿಯೊಬ್ಬ ಮನುಷ್ಯನು ಅನುಭವಿಸಲೇಬೇಕಾದ ಪಾಡು.. ಕೇವಲ ತುತ್ತು ಅನ್ನಕ್ಕಾಗಿಯೇ ಈ ಪರಿಪಾಟಲು? ಇಲ್ಲಾ ತುತ್ತು ಅನ್ನಕ್ಕಾಗಲಿ ನಿರ್ಧಿಷ್ಟ ಗುರಿ ಸಾಧನೆಗಾಗಲಿ ವ್ಯಕ್ತಿಯೊಬ್ಬ ಕಷ್ಟ ನೋವುಗಳನ್ನು ಅನುಭವಿಸಲು ಸಿದ್ಧನಿರಬೇಕು. ಅಂತೆಯೇ ಪ್ರತಿಯೊಬ್ಬ ವ್ಯಕ್ತಿ ಹುಟ್ಟಿನಿಂದ ಮರಣದವರೆಗೂ ಹೋರಾಟ ನಡಿಸುತ್ತಾನೆ, ಮತ್ತೆ ನಡಿಸಲೇಬೇಕು.
ಇತ್ತೀಚಿಗಷ್ಟೇ ಆಚರಿಸಿದ ಮಾನವಹಕ್ಕು ದಿನಾಚರಣೆಯೂ ಇದನ್ನೇ ಪ್ರತಿಬಿಂಬಿಸುತ್ತದೆ. ವ್ಯಕ್ತಿಯು ಸಂವಿಧಾನದನ್ವಯ ನಿರ್ಧಿಷ್ಟ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿದ್ದು, ಅವುಗಳನ್ನು ಪಡೆಯಲು ನಿಭಾಯಿಸಲು ಹೋರಾಟದ ಬದುಕು ನಡೆಸುತ್ತಾನೆ.
ಆದರೆ, ಇಂದಿನ ಜನ ಕೇವಲ ಹಕ್ಕಿನ ಬಗ್ಗೆ ಮಾತನಾಡುವವರೇ ಹೊರತು ಕರ್ತವ್ಯದ ಬಗ್ಗೆ ಒಂದಿಷ್ಟು ಯೋಚಿಸಲಾರರು. ತಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳಲು ಹಕ್ಕಿನ ಕುರಿತಷ್ಟೇ ಗಮನಹರಿಸುವವರೂ ನಮ್ಮ ನಡುವೆಯೇ ಇದ್ದಾರೆ. ಇವುಗಳನ್ನು ಬದಿಗಿಟ್ಟು ಪುನಃ ನೋಡಿದಾಗ ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಭೂಮಿಯಲ್ಲಿ ಎಂದಿಗೂ ಬದಲಾಗದಿರದ ಬಡತನ, ಹಸಿವು, ನಿರುದ್ಯೋಗ ಅನಾದಿಕಾಲದಿಂದಲೂ ಕೇಳುತ್ತಲಿರುವ ಅದೇ ಮುಂದುವರೆಯುತ್ತಿರುವ ಭಾರತ; ಇಂದಿಗೂ ಯಾವ ಹಕ್ಕು, ಅನುಕೂಲಗಳು ಯಾರಿಗೆ ಉಪಯೋಗವಾಗಬೇಕೋ ಅವರಿಗಾಗದಿರುವುದು ಅಸಮಾಧನೀಯ.
ಇಡೀ ನಾಡು ಸ್ವಚ್ಛಗೊಳಿಸಬೇಕಾಗಿರುವವರು ಕೇವಲ ತಮ್ಮ ಮನೆ ಮಾತ್ರ ಸ್ವಚ್ಛಗೊಳಿಸಿಕೊಳ್ಳುತ್ತಿರುವುದು ವಿಪರ್ಯಾಸ. ಪ್ರತಿಯೊಬ್ಬ ಜನಪ್ರತಿನಿಧಿ ಯಾವಾಗ ತನ್ನ ಸ್ವಾರ್ಥದ ಪರಿದೆಯಿಂದ ಹೊರಬಂದು ಜನರ ಏಳಿಗೆಗಾಗಿ ಪ್ರಮಾಣಿಕವಾಗಿ ಶ್ರಮಿಸುವನೋ ಆಗ ದೇಶ ಮುಂದುವರೆದ ಭಾರತವಾಗಲು ಸಾಧ್ಯ.
ಬೇರೆಯವರಿಗೆ ಸಾಮಾನ್ಯವೆನ್ನಿಸುವ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ತಾನು ಶ್ರೇಷ್ಟನೇ. ಯೋಗ್ಯತೆಗೆ ತಕ್ಕಂತೆ ಉದ್ಯೋಗ ಮತ್ತು ಉದ್ಯೋಗಕ್ಕೆ ತಕ್ಕಂತೆ ವೇತನ ನೀಡಿದ್ದಲ್ಲಿ ನಿರುದ್ಯೋಗ, ಹಸಿವು ಮತ್ತು ಬಡತನವೆಂಬ ಕತ್ತಲು ಮಾಯವಾಗಿ ಬೆಳಕು ಮೂಡುವುದರಲ್ಲಿ ಸಂಶಯವಿಲ್ಲ.
