HomeIndia Newsಮೋದಿ ವಿಡಿಯೋ ವಿವಾದಕ್ಕೆ ಜುಕರ್‌ಬರ್ಗ್ ಕ್ಷಮೆ: ‘ಸೇಫ್ ಹಾರ್ಬರ್’ ರದ್ದಿನ ಎಚ್ಚರಿಕೆ ಬಳಿಕ ಮೆಟಾ ಯೂ-ಟರ್ನ್

ಮೋದಿ ವಿಡಿಯೋ ವಿವಾದಕ್ಕೆ ಜುಕರ್‌ಬರ್ಗ್ ಕ್ಷಮೆ: ‘ಸೇಫ್ ಹಾರ್ಬರ್’ ರದ್ದಿನ ಎಚ್ಚರಿಕೆ ಬಳಿಕ ಮೆಟಾ ಯೂ-ಟರ್ನ್

For Dai;y Updates Join Our whatsapp Group

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ವಿಡಿಯೋ ತಾತ್ಕಾಲಿಕವಾಗಿ ತೆಗೆದುಹಾಕಿದ ವಿವಾದದ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಿದ್ದಾರೆ. ಮಕ್ಕಳ ಲೈಂಗಿಕ ಶೋಷಣೆ (CSAM) ಸಂಬಂಧಿತ ವಿಷಯ, ಡೀಪ್‌ಫೇಕ್ ಕಂಟೆಂಟ್ ಹಾಗೂ ಪ್ಲಾಟ್‌ಫಾರ್ಮ್ ನಿರ್ವಹಣೆಯ ಲೋಪದೋಷಗಳ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅವರು, ನಿರ್ದಿಷ್ಟ ವಿಷಯಗಳಿಗೆ ಹೆಚ್ಚಿನ ಪ್ರಚಾರ (Boost) ನೀಡಲು ಹಣ ಪಾವತಿಸಲಾಗಿರುವುದನ್ನೂ ಒಪ್ಪಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ವಿಡಿಯೋವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದ ಪ್ರಕರಣದ ಹಿನ್ನೆಲೆಯಲ್ಲಿ, ಮೂರು ದಿನಗಳೊಳಗೆ ಜುಕರ್‌ಬರ್ಗ್ ವೈಯಕ್ತಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲವಾದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ಮೆಟಾ ಪಡೆಯುತ್ತಿರುವ ‘ಸೇಫ್ ಹಾರ್ಬರ್’ ರಕ್ಷಣೆಯನ್ನು ಹಿಂಪಡೆಯಲು ಶಿಫಾರಸು ಮಾಡಲಾಗುವುದು ಎಂದು ಸಂಸದೀಯ ತಂತ್ರಜ್ಞಾನ ಸಮಿತಿ ಎಚ್ಚರಿಕೆ ನೀಡಿತ್ತು.

ಈ ಬೆಳವಣಿಗೆಯ ಬೆನ್ನಲ್ಲೇ ಜುಕರ್‌ಬರ್ಗ್ ಕ್ಷಮೆ ಕೇಳಿದ್ದು, ಪ್ಲಾಟ್‌ಫಾರ್ಮ್‌ನಲ್ಲಿ ಕಂಡುಬಂದ ದೋಷಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಸಂಸದೀಯ ತಂತ್ರಜ್ಞಾನ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ, “ಕ್ಷಮೆಯಾಚನೆ ಮಾತ್ರ ಸಾಕಾಗುವುದಿಲ್ಲ. ತಪ್ಪಿಗೆ ಕಾರಣರಾದವರ ಜವಾಬ್ದಾರಿ ನಿಗದಿಯಾಗಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರಧಾನಿ ಮೋದಿ ನೀಡಿದ್ದ ಭಾಷಣದ ವಿಡಿಯೋ ಸುಮಾರು ಐದು ಗಂಟೆಗಳ ಕಾಲ ಫೇಸ್‌ಬುಕ್‌ನಲ್ಲಿ ಕಾಣಿಸದಿದ್ದರಿಂದ ಈ ವಿವಾದ ಆರಂಭವಾಗಿತ್ತು. ಬಳಿಕ ತಾಂತ್ರಿಕ ದೋಷದಿಂದ ವಿಡಿಯೋ ತೆಗೆದುಹಾಕಲಾಗಿತ್ತು ಹಾಗೂ ನಂತರ ಮರುಸ್ಥಾಪಿಸಲಾಗಿದೆ ಎಂದು ಮೆಟಾ ಸ್ಪಷ್ಟನೆ ನೀಡಿದ್ದರೂ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಸಂಸದೀಯ ಸಮಿತಿ ಆ ಸಮಜಾಯಿಷಿಯನ್ನು ತಿರಸ್ಕರಿಸಿತ್ತು.

ಸಂಸದೀಯ ಸಮಿತಿಯ ವಿಚಾರಣೆ ವೇಳೆ ಮೆಟಾ ಪ್ರತಿನಿಧಿಗಳಿಗೆ ತೀವ್ರ ಪ್ರಶ್ನೆಗಳ ಸುರಿಮಳೆಯಾಗಿತ್ತು. ಪ್ರಧಾನಿಯವರ ಅಧಿಕೃತ ವಿಡಿಯೋ ತೆಗೆದುಹಾಕಲು ಅನುಮತಿ ನೀಡಿದವರು ಯಾರು? ಆಕ್ಷೇಪಾರ್ಹ ವಿಷಯಗಳು ಉಳಿದಿರುವಾಗ ಅಧಿಕೃತ ವಿಡಿಯೋವನ್ನೇ ಏಕೆ ಅಳಿಸಲಾಯಿತು? ಆಲ್ಗರಿದಮ್ ತಾರತಮ್ಯದಿಂದ ಕೂಡಿದೆಯೇ? ಎಂಬ ಪ್ರಶ್ನೆಗಳನ್ನು ಸಮಿತಿ ಮುಂದಿಟ್ಟಿತ್ತು.

ಒಂದು ವೇಳೆ ಮೆಟಾದ ‘ಸೇಫ್ ಹಾರ್ಬರ್’ ರಕ್ಷಣೆ ರದ್ದಾದರೆ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟವಾಗುವ ಅಕ್ರಮ ಅಥವಾ ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ಮೆಟಾ ಅಧಿಕಾರಿಗಳೇ ನೇರ ಕಾನೂನು ಹೊಣೆಗಾರಿಕೆಯನ್ನು ಎದುರಿಸಬೇಕಾಗುತ್ತದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img