ಭೋಪಾಲ್: ಧರ್ಮ ಎನ್ನುವುದು ಜನರನ್ನು ಬಂಧಿಸುವುದಲ್ಲ, ಬದಲಾಗಿ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯುತ್ತಿರುವ ‘ಯುವ ಧರ್ಮ ಸಂಸತ್–2026’ ಕಾರ್ಯಕ್ರಮದಲ್ಲಿ ಯುವಕರನ್ನುದ್ದೇಶಿಸಿ ಮಾತನಾಡಿದರು.
ಧರ್ಮ ಮತ್ತು ‘ರಿಲಿಜನ್’ ನಡುವಿನ ವ್ಯತ್ಯಾಸವನ್ನು ವಿವರಿಸಿದ ಮೋಹನ್ ಭಾಗವತ್, ಭಾರತೀಯ ಪರಂಪರೆಯಲ್ಲಿ ‘ಧರ್ಮ’ ಎಂಬ ಪರಿಕಲ್ಪನೆ ಪಾಶ್ಚಾತ್ಯ ಅರ್ಥದಲ್ಲಿನ ‘ರಿಲಿಜನ್’ಗೆ ಸಮಾನವಲ್ಲ ಎಂದು ಹೇಳಿದರು. ಧರ್ಮವನ್ನು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸಿ ನೋಡುವುದರಿಂದ ಅದರ ಮೂಲ ಅರ್ಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.
ಭಾಗವತ್ ಅವರ ಪ್ರಕಾರ, ಧರ್ಮವು ಸತ್ಯ, ಕರುಣೆ, ಶುದ್ಧತೆ, ಆತ್ಮಶಿಸ್ತು ಹಾಗೂ ಕರ್ತವ್ಯದಂತಹ ಮೌಲ್ಯಗಳಿಗೆ ಸಂಬಂಧಿಸಿದೆ. ಧರ್ಮವು ವ್ಯಕ್ತಿಯ ಜೀವನಕ್ಕೆ ದಿಕ್ಕು ನೀಡುವುದರ ಜೊತೆಗೆ ಎಲ್ಲರ ಕಲ್ಯಾಣವನ್ನು ಒಳಗೊಂಡಿರುವ ಪರಿಕಲ್ಪನೆಯಾಗಿದೆ ಎಂದು ಅವರು ವಿವರಿಸಿದರು.
ಯುವಕರು ಧರ್ಮದ ಕುರಿತು ಚಿಂತನೆ ಮತ್ತು ಚರ್ಚೆ ನಡೆಸುತ್ತಿರುವುದು ಸಂತಸದ ವಿಚಾರ ಎಂದು ಭಾಗವತ್ ಹೇಳಿದರು. ಧರ್ಮದ ಅರಿವು ಕೇವಲ ವೃದ್ಧಾಪ್ಯದಲ್ಲಿ ಪಡೆಯಬೇಕಾದ ವಿಷಯವಲ್ಲ. ಜೀವನದ ಆರಂಭದಿಂದಲೇ ಧರ್ಮವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಯಬೇಕು ಎಂದು ಅವರು ಸಲಹೆ ನೀಡಿದರು.
ಮನುಷ್ಯ ತನ್ನ ಇಚ್ಛೆಯಂತೆ ಎಲ್ಲವೂ ನಡೆಯಬೇಕು ಎಂಬ ಭಾವನೆಯಲ್ಲಿ ಬದುಕುತ್ತಾನೆ. ಆದರೆ ಸೃಷ್ಟಿ ತನ್ನದೇ ಆದ ಪ್ರಕೃತಿ ಮತ್ತು ನಿಯಮಗಳಂತೆ ನಡೆಯುತ್ತದೆ. ಹೀಗಾಗಿ ಯುವಕರು ‘ಎಲ್ಲವೂ ನನಗೆ ಗೊತ್ತು’ ಎಂಬ ಅಹಂಕಾರವನ್ನು ಬದಿಗಿಟ್ಟು, ಮನಸ್ಸನ್ನು ತೆರೆದಿಟ್ಟುಕೊಂಡು ಸತ್ಯವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ಭಾಗವತ್ ಹೇಳಿದರು.
ಧರ್ಮ ಎನ್ನುವುದು ಜೀವನಪೂರ್ತಿ ಸಾಗುವ ಅರಿವು ಮತ್ತು ಆಚರಣೆಯ ಪ್ರಕ್ರಿಯೆ ಎಂದು ಅವರು ವಿವರಿಸಿದರು. ಧರ್ಮವು ಕೇವಲ ಆಚರಣೆಗಳ ಸಮೂಹವಲ್ಲ, ಅದು ವ್ಯಕ್ತಿಯ ನಡೆ-ನುಡಿ, ಕರ್ತವ್ಯ ಮತ್ತು ಜವಾಬ್ದಾರಿಗಳಿಗೂ ಸಂಬಂಧಿಸಿದೆ ಎಂದು ಹೇಳಿದರು.



