ರಾಮನಗರ: ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಅವರಿಗೆ ‘ರೆಸ್ಟ್ ಗ್ಯಾರಂಟಿ’ ನೀಡಿದ್ದು, ಅವರನ್ನು ಒಗ್ಗರಣೆಗೆ ಬಳಸುವ ಕರಿಬೇವು ಸೊಪ್ಪಿನಂತೆ ಸೈಡಿಗೆ ಇಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಸಿದ್ದರಾಮಯ್ಯರ ಬಾಯಿ ಮುಚ್ಚಿಸಿ ರೆಸ್ಟ್ ಗ್ಯಾರಂಟಿ ನೀಡಲಾಗಿದೆ”: “ಡಿ.ಕೆ.ಶಿವಕುಮಾರ್ ಮುಖ ನೋಡಿ ಒಕ್ಕಲಿಗರು ವೋಟ್ ಹಾಕುವುದಿಲ್ಲ ಎಂದು ಅವರದೇ ಪಕ್ಷದ ನಾಯಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷವು ಒಗ್ಗರಣೆಗೆ ಬಳಸಿ ಪಕ್ಕಕ್ಕೆ ಇಟ್ಟಿದೆ. ಅವರ ಬಾಯಿ ಮುಚ್ಚಿಸಲಾಗಿದ್ದು, ಮೈಸೂರಿನ ಮನೆಯಲ್ಲಿ ರೆಸ್ಟ್ ಗ್ಯಾರಂಟಿ ಮಾಡುವ ಸ್ಥಿತಿಗೆ ತರಲಾಗಿದೆ” ಎಂದು ಆರ್.ಅಶೋಕ್ ಕುಟುಕಿದರು.
“ರಾಜ್ಯ ಸರ್ಕಾರ ದಿವಾಳಿ, ಸಾಲ ಮಾಡದೇ ಬಜೆಟ್ ಮಂಡಿಸಲಿ”: ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಸರ್ಕಾರ ಸಚಿವ ಸಂಪುಟ ಸಭೆ ನಡೆಸುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, “ರಾಜ್ಯ ಸರ್ಕಾರ ಸಾಲದಲ್ಲಿ ಮುಳುಗಿದ್ದು, ಹೊಸ ಘೋಷಣೆಗಳಿಗೆ ಹಣ ಎಲ್ಲಿಂದ ತರುತ್ತದೆ? ಕಾಂಗ್ರೆಸ್ ಸರ್ಕಾರ ಮೂರೇ ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ. ಸಾಲ ಮಾಡಲು ಹೊರಟಿದ್ದು, ಪ್ರಸ್ತುತ ವರ್ಷಕ್ಕೆ 35,000 ದಿಂದ 40,000 ಕೋಟಿ ರೂ. ಬಡ್ಡಿ ಕಟ್ಟುವ ಸ್ಥಿತಿ ಎದುರಾಗಿದೆ. ಬೊಮ್ಮಾಯಿ ಸರ್ಕಾರ ಉಳಿತಾಯದ ಬಜೆಟ್ ನೀಡಿದ್ದರೆ, ಈ ಸರ್ಕಾರ ದಿವಾಳಿಯಾದ ಬಜೆಟ್ ನೀಡಿದೆ. ಧೈರ್ಯವಿದ್ದರೆ ಸಾಲ ಮಾಡದೇ ಬಜೆಟ್ ಮಂಡಿಸಿ ತೋರಿಸಲಿ” ಎಂದು ಸಿಎಂ ಅವರಿಗೆ ಸವಾಲು ಹಾಕಿದರು.
“ಅಭಿವೃದ್ಧಿ ಶೂನ್ಯ, ರೆಸಾರ್ಟ್ನಲ್ಲಿ ಕ್ಯಾಬಿನೆಟ್”: ಸರ್ಕಾರದ ಆಡಳಿತ ವೈಫಲ್ಯಗಳನ್ನು ಸಾಲಾಗಿ ಪಟ್ಟಿ ಮಾಡಿದ ಅವರು, “ಕೆಎಸ್ಆರ್ಟಿಸಿಗೆ 5,000 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದ್ದು, ಸಿಬ್ಬಂದಿಗೆ ಸಂಬಳ ಹಾಗೂ ಡೀಸೆಲ್ಗೂ ಹಣವಿಲ್ಲದಂತಾಗಿದೆ. ಕ್ರಷರ್ಗಳಿಂದ ವರ್ಷಕ್ಕೆ 1 ಕೋಟಿ ಕಮಿಷನ್ ಬೇಡಿಕೆ ಇಟ್ಟಿರುವುದರಿಂದ ಜೆಲ್ಲಿ, ಎಂ-ಸ್ಯಾಂಡ್ ಸಿಗದೆ ರಸ್ತೆ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಆಸ್ಪತ್ರೆಗಳಲ್ಲಿ ಔಷಧಿಯಿಲ್ಲ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಏರಿಕೆಯಾಗಿಲ್ಲ ಮತ್ತು ರೈತರಿಗೆ ಸೂಕ್ತ ಬರ ಪರಿಹಾರ ತಲುಪಿಲ್ಲ. ಹಿಂದೆ ಕಲಬುರಗಿಯಲ್ಲಿ ನಡೆಸಿದ ಕ್ಯಾಬಿನೆಟ್ ಸಭೆಯ ಘೋಷಣೆಗಳು ಒಂದೂ ಜಾರಿಯಾಗಿಲ್ಲ. ಈಗ ಮಂಗಳೂರಿನ ರೆಸಾರ್ಟ್ನಲ್ಲಿ ಮೀನು, ಏಡಿಕಾಯಿ ತಿಂದುಕೊಂಡು ಕ್ಯಾಬಿನೆಟ್ ನಡೆಸಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.



