ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು ತಡವಾಗಿ ಮಾಡಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸುವ ಹೊಸ ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ. ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ-2026ರ ಅಡಿಯಲ್ಲಿ ಈ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ಕುರಿತು ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅಧಿಸೂಚನೆ ಹೊರಡಿಸಿದ್ದಾರೆ.
ಹೊಸ ನಿಯಮದ ಪ್ರಕಾರ, ಜನನ ಅಥವಾ ಮರಣ ಸಂಭವಿಸಿದ ದಿನಾಂಕದಿಂದ ಒಂದು ವರ್ಷ ಕಳೆದ ಬಳಿಕ ಹಾಗೂ ಎರಡು ವರ್ಷ ಪೂರ್ಣಗೊಳ್ಳುವ ಮುನ್ನ ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಸಂಬಂಧಪಟ್ಟ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಥವಾ ಅಧಿಕಾರ ಪಡೆದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಆದೇಶ ಪಡೆಯಬೇಕಾಗುತ್ತದೆ.
ಸಂಬಂಧಪಟ್ಟ ಘಟನೆಗೆ ನೀಡಿರುವ ವಿವರಗಳ ನಿಖರತೆಯನ್ನು ಪರಿಶೀಲಿಸಿದ ಬಳಿಕ ಹಾಗೂ ನಿಗದಿತ ಶುಲ್ಕ ಪಾವತಿಸಿದ ನಂತರ ನೋಂದಣಿಗೆ ಅನುಮತಿ ನೀಡಲಾಗುತ್ತದೆ.
ಇನ್ನು ಜನನ ಅಥವಾ ಮರಣ ಸಂಭವಿಸಿ ಎರಡು ವರ್ಷಕ್ಕಿಂತ ಹೆಚ್ಚು ಸಮಯದ ಬಳಿಕ ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಆದೇಶ ಕಡ್ಡಾಯವಾಗಲಿದೆ. ಇದರಿಂದ ತಡವಾಗಿ ನಡೆಯುವ ಜನನ ಮತ್ತು ಮರಣ ನೋಂದಣಿಗಳ ಪರಿಶೀಲನೆಗೆ ಹೆಚ್ಚಿನ ಮಟ್ಟದ ನ್ಯಾಯಾಂಗ ಮೇಲ್ವಿಚಾರಣೆ ಬರಲಿದೆ.
ಕಾಯ್ದೆಯ ಸೆಕ್ಷನ್‌ಗೆ ತಿದ್ದುಪಡಿ
1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಸೆಕ್ಷನ್ 13(3)ಕ್ಕೆ ತಿದ್ದುಪಡಿ ತಂದು ಈ ಬದಲಾವಣೆಗಳನ್ನು ಮಾಡಲಾಗಿದೆ. ಜನನ ಮತ್ತು ಮರಣ ಘಟನೆಗಳನ್ನು ನಿಗದಿತ ಸಮಯದಲ್ಲಿ ನೋಂದಾಯಿಸುವಂತೆ ಜನರನ್ನು ಉತ್ತೇಜಿಸುವುದು ತಿದ್ದುಪಡಿಯ ಉದ್ದೇಶ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜನನ ಮತ್ತು ಮರಣ ನೋಂದಣಿ ಕಾನೂನುಬದ್ಧವಾಗಿ ಕಡ್ಡಾಯವಾಗಿದ್ದು, ಈ ಕಾಯ್ದೆಯಡಿ ನೀಡಲಾಗುವ ಜನನ ಮತ್ತು ಮರಣ ಪ್ರಮಾಣಪತ್ರಗಳು ವ್ಯಕ್ತಿಯ ಜನನ ಅಥವಾ ಮರಣವನ್ನು ದೃಢೀಕರಿಸುವ ಪ್ರಮುಖ ಕಾನೂನು ದಾಖಲೆಗಳಾಗಿವೆ.
ಹೀಗಾಗಿ, ಜನನ ಅಥವಾ ಮರಣ ಸಂಭವಿಸಿದ ಬಳಿಕ ನೋಂದಣಿ ಪ್ರಕ್ರಿಯೆಯನ್ನು ವಿಳಂಬ ಮಾಡದೆ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು ಅಗತ್ಯವಾಗಲಿದೆ.



