ಕಾರವಾರ: ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿ ಕಾರವಾರ–ಅಂಕೋಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಘೋಷಿಸಿದ್ದಾರೆ. ಆದರೆ ಈ ರಾಜೀನಾಮೆ ನಾಟಕಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯೇ ಹೊಸ ತಿರುವು ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದ್ದರೂ, ಶಾಸಕ ಸತೀಶ್ ಸೈಲ್, ಮಂಕಾಳು ವೈದ್ಯ, ಆರ್.ವಿ. ದೇಶಪಾಂಡೆ ಹಾಗೂ ಭೀಮಣ್ಣ ನಾಯ್ಕ ಅವರಲ್ಲಿ ಯಾರಿಗೂ ಸಚಿವ ಸ್ಥಾನ ನೀಡದಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಸತೀಶ್ ಸೈಲ್ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಹೊಂದಿದ್ದ ಕಾರ್ಯಕರ್ತರು ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಯುವ ಕಾಂಗ್ರೆಸ್ ಪ್ರಕಟಣೆಯಲ್ಲಿ, ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ನಿಷ್ಠೆಗೆ ಗೌರವ ಸಿಕ್ಕಿಲ್ಲ. ಜಿಲ್ಲೆಗೆ ಸಚಿವ ಸ್ಥಾನ ನೀಡದ ನಿರ್ಧಾರದಿಂದ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಹೀಗಾಗಿ ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದ ಎಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಘೋಷಿಸಿದ್ದಾರೆ.
ರಾಜೀನಾಮೆ ಪಟ್ಟಿಯಲ್ಲಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ನೂತನ ಜೈನ, ಉಪಾಧ್ಯಕ್ಷ ದರ್ಶನ್ ನಾಯ್ಕ್, ಕಾರವಾರ ಬ್ಲಾಕ್ ಅಧ್ಯಕ್ಷ ಅಭಿಷೇಕ್ ರಾಣೆ ಸೇರಿದಂತೆ ಹಲವು ಪದಾಧಿಕಾರಿಗಳ ಹೆಸರುಗಳಿವೆ.
ಆದರೆ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಮೋದ್ (ಸುಬ್ರಹ್ಮಣ್ಯ) ಶಿರಸಿಕರ್, ರಾಜೀನಾಮೆ ನೀಡಿದವರು ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಸಂಘಟನಾ ಚಟುವಟಿಕೆಯಲ್ಲಿ ಸಕ್ರಿಯರಾಗಿರಲಿಲ್ಲ. ಮೂರು ಸಭೆಗಳಿಗೆ ಗೈರಾಗಿದ್ದ ಕಾರಣ ಅವರನ್ನು ಕಾರ್ಯಕಾರಿಣಿ ಸಭೆಯಲ್ಲಿ ಅಮಾನತುಗೊಳಿಸಲು ಈಗಾಗಲೇ ನಿರ್ಧರಿಸಲಾಗಿತ್ತು. ಈ ವಿಚಾರವನ್ನು ನಿನ್ನೆ ತಿಳಿಸಿದ ಬಳಿಕ ಇಂದು ವಾಟ್ಸಾಪ್ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಹೀಗಾಗಿ ಇದನ್ನು ಅಧಿಕೃತ ರಾಜೀನಾಮೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಉತ್ತರ ಕನ್ನಡ ಕಾಂಗ್ರೆಸ್‌ನಲ್ಲಿ ರಾಜಕೀಯ ಭಿನ್ನಮತ ಮತ್ತಷ್ಟು ಬಹಿರಂಗವಾಗಿದೆ.



