ಉತ್ತರ ಕನ್ನಡ: ಮುರುಡೇಶ್ವರ ದೇವಸ್ಥಾನದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಲಕ್ಕಿ ಡ್ರಾ ನಡೆಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ವಂಚನಾ ಜಾಲವನ್ನು ಮುರುಡೇಶ್ವರ ಪೊಲೀಸರು ಭೇದಿಸಿದ್ದಾರೆ. ದೇವಸ್ಥಾನದ ಹೆಸರನ್ನು ದುರುಪಯೋಗಪಡಿಸಿಕೊಂಡು ಲಾಟರಿ ಟಿಕೆಟ್ ಮಾರಾಟದ ನೆಪದಲ್ಲಿ ಮೋಸ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಲಖನಗಾಂವ್ ನಿವಾಸಿ ನರಸಿಂಗ್ ವೆಂಕಟರಾವ್ ತಗರಖೇಡೆ (32) ಎಂದು ಗುರುತಿಸಲಾಗಿದೆ. ಈತ “ಶ್ರೀ ಮುರುಡೇಶ್ವರ ಅದೃಷ್ಟ ಡ್ರಾ” ಹೆಸರಿನಲ್ಲಿ ನಕಲಿ ಪೋಸ್ಟರ್‌ಗಳನ್ನು ಸೃಷ್ಟಿಸಿ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸಿ ಆನ್‌ಲೈನ್ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ನಡೆಸುತ್ತಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಕುರಿತು ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ.
ಮುರುಡೇಶ್ವರ ದೇವಸ್ಥಾನ ಯಾವುದೇ ಲಕ್ಕಿ ಡ್ರಾ ಅಥವಾ ಲಾಟರಿ ಯೋಜನೆಗಳನ್ನು ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಆಡಳಿತ ಮಂಡಳಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂತಹ ನಕಲಿ ಜಾಹೀರಾತುಗಳಿಗೆ ಸಾರ್ವಜನಿಕರು ಬಲಿಯಾಗದಂತೆ ಎಚ್ಚರಿಕೆ ನೀಡಿದೆ.



