HomeKarnataka Newsಕರ್ನಾಟಕಕ್ಕೆ ಅಮೃತ್ ಭಾರತ್ ಯೋಜನೆಯ ಕೊಡುಗೆ: ನವೀಕೃತ ನಾಲ್ಕು ರೈಲು ನಿಲ್ದಾಣಗಳಿಗೆ ಪ್ರಧಾನಿ ಮೋದಿ ಚಾಲನೆ

ಕರ್ನಾಟಕಕ್ಕೆ ಅಮೃತ್ ಭಾರತ್ ಯೋಜನೆಯ ಕೊಡುಗೆ: ನವೀಕೃತ ನಾಲ್ಕು ರೈಲು ನಿಲ್ದಾಣಗಳಿಗೆ ಪ್ರಧಾನಿ ಮೋದಿ ಚಾಲನೆ

For Dai;y Updates Join Our whatsapp Group

ಬೆಂಗಳೂರು: ಕೇಂದ್ರ ಸರ್ಕಾರದ ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ನವೀಕರಣಗೊಂಡಿರುವ ಕರ್ನಾಟಕದ ನಾಲ್ಕು ರೈಲು ನಿಲ್ದಾಣಗಳು ಸೇರಿದಂತೆ ದೇಶದಾದ್ಯಂತ ಒಟ್ಟು 75 ರೈಲು ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನ ಜಲಂಧರ್ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ವರ್ಚುವಲ್ ಮೂಲಕ ಉದ್ಘಾಟಿಸಿದರು.

ಸ್ಥಳೀಯ ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಈ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರಯಾಣಿಕರಿಗೆ ವಿಶ್ವದರ್ಜೆಯ ಹಾಗೂ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡದ ಬಂಟ್ವಾಳ, ಕೊಪ್ಪಳ, ಧಾರವಾಡ ಜಿಲ್ಲೆಯ ಅಳ್ನಾವರ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ರೈಲು ನಿಲ್ದಾಣಗಳು ಈ ಯೋಜನೆಯಡಿ ನವೀಕರಣಗೊಂಡಿವೆ.

ಸುಮಾರು 15.10 ಕೋಟಿ ರೂಪಾಯಿ ವೆಚ್ಚದಲ್ಲಿ ಬಾದಾಮಿ ರೈಲು ನಿಲ್ದಾಣವನ್ನು ಆಧುನೀಕರಿಸಲಾಗಿದೆ. ಎರಡು ಪ್ಲಾಟ್‌ಫಾರ್ಮ್‌ಗಳಿದ್ದ ನಿಲ್ದಾಣದಲ್ಲಿ ಈಗ ಮೂರು ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗಿದೆ. ಟಿಕೆಟ್ ಕೌಂಟರ್‌ಗಳ ಸಂಖ್ಯೆಯನ್ನು ಒಂದರಿಂದ ನಾಲ್ಕಕ್ಕೆ ಹೆಚ್ಚಿಸಲಾಗಿದ್ದು, ದಿವ್ಯಾಂಗರು ಹಾಗೂ ದೃಷ್ಟಿಹೀನರಿಗಾಗಿ ಪ್ರತ್ಯೇಕ ಟಿಕೆಟ್ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ.

ಸುಮಾರು 200 ಚದರ ಮೀಟರ್ ವಿಸ್ತೀರ್ಣದ ಹೊಸ ಕಟ್ಟಡ, 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ, ಅಲಂಕೃತ ಮುಂಭಾಗ, ಕುಡಿಯುವ ನೀರಿನ ವ್ಯವಸ್ಥೆ, ದೃಷ್ಟಿಹೀನರಿಗೆ ಸ್ಪರ್ಶ ಮಾರ್ಗ, ವಿಶೇಷ ಶೌಚಾಲಯ, ಕಾಯ್ದಿರಿಸಿದ ಪಾರ್ಕಿಂಗ್, ಎರಡು ಲಿಫ್ಟ್‌ಗಳು, ತಾಯಂದಿರಿಗೆ ಹಾಲುಣಿಸುವ ಕೊಠಡಿ, ಹವಾನಿಯಂತ್ರಿತ ಕಾಯುವ ಕೊಠಡಿ ಸೇರಿದಂತೆ ಒಟ್ಟು ಐದು ನಿರೀಕ್ಷಣಾ ಕೊಠಡಿಗಳು, ಸೋಲಾರ್ ವಿದ್ಯುತ್ ಹಾಗೂ ಉಚಿತ ವೈ-ಫೈ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಅಳ್ನಾವರ ರೈಲು ನಿಲ್ದಾಣದ ಮುಖ್ಯ ಕಟ್ಟಡವನ್ನು ವಿಸ್ತರಿಸಲಾಗಿದ್ದು, ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೊಸ ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಸುಮಾರು 4,500 ಚದರ ಮೀಟರ್ ಪ್ರದೇಶದಲ್ಲಿ ವಾಹನ ನಿಲುಗಡೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.

ಇಲ್ಲಿ ಡಿಜಿಟಲ್ ಟಿಕೆಟ್ ಕೌಂಟರ್‌ಗಳು, ಹವಾನಿಯಂತ್ರಿತ ಕಾಯುವ ಕೊಠಡಿಗಳು, ಮಹಿಳೆಯರಿಗಾಗಿ ಬೇಬಿ-ಫೀಡಿಂಗ್ ಕೊಠಡಿ, ಎಕ್ಸಿಕ್ಯೂಟಿವ್ ಲೌಂಜ್, ಪ್ಲಾಟ್‌ಫಾರ್ಮ್‌ಗಳಿಗೆ ಸುಧಾರಿತ ರೂಫ್ ಶೆಲ್ಟರ್, ಆಧುನಿಕ ಶೌಚಾಲಯಗಳು, ಎರಡು ಲಿಫ್ಟ್‌ಗಳು, 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ, ದಿವ್ಯಾಂಗರಿಗಾಗಿ ರ್ಯಾಂಪ್ ಹಾಗೂ ಉಚಿತ ಹೈ-ಸ್ಪೀಡ್ ವೈ-ಫೈ ಸೌಲಭ್ಯ ಕಲ್ಪಿಸಲಾಗಿದೆ.

ಸುಮಾರು 21.14 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಪ್ಪಳ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು ಜಿ+1 ಮಾದರಿಯ ಹೊಸ ನಿಲ್ದಾಣ ಕಟ್ಟಡ ನಿರ್ಮಿಸಲಾಗಿದ್ದು, ಟಿಕೆಟ್ ಬುಕ್ಕಿಂಗ್ ಕಚೇರಿ, ನಿರೀಕ್ಷಣಾ ಕೊಠಡಿಗಳು ಹಾಗೂ 600 ಚದರ ಮೀಟರ್ ವಿಸ್ತೀರ್ಣದ ಸುತ್ತಾಟ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ.

ಇದಲ್ಲದೆ, ಪ್ಲಾಟ್‌ಫಾರ್ಮ್ ಶೆಲ್ಟರ್, 12 ಮೀಟರ್ ಅಗಲದ ಕೇಂದ್ರ ಪಾದಚಾರಿ ಮೇಲ್ಸೇತುವೆ, ಎರಡು ಲಿಫ್ಟ್‌ಗಳು, ಎರಡು ಎಸ್ಕಲೇಟರ್‌ಗಳು, ಎಲ್‌ಇಡಿ ಬೆಳಕಿನ ವ್ಯವಸ್ಥೆ, ಸುಲಭ್ ಶೌಚಾಲಯ, ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ, ಹವಾನಿಯಂತ್ರಿತ ಕಾಯುವ ಕೊಠಡಿ, ಡಿಜಿಟಲ್ ಲಾಕರ್ ಹಾಗೂ ಶಿಶು ಆಹಾರ ಕೊಠಡಿ ಸೇರಿದಂತೆ ಹಲವು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಒದಗಿಸಲಾಗಿದೆ.

ಅಮೃತ್ ಭಾರತ್ ಯೋಜನೆಯಡಿ ರೈಲು ನಿಲ್ದಾಣಗಳ ಆಧುನೀಕರಣದಿಂದ ಪ್ರಯಾಣಿಕರಿಗೆ ಉತ್ತಮ ಮೂಲಸೌಕರ್ಯ, ಸುಗಮ ಸೇವೆ ಹಾಗೂ ಸುರಕ್ಷಿತ ಪ್ರಯಾಣದ ಅನುಭವ ದೊರೆಯಲಿದ್ದು, ಸ್ಥಳೀಯ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗುವ ನಿರೀಕ್ಷೆಯಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img