ಕಾರವಾರ: ತದಡಿ ಬಂದರಿನ ಅಳಿವೆಯಲ್ಲಿ ಹೂಳು ಮತ್ತು ಅಲೆಗಳ ಅಬ್ಬರದಿಂದ ಮೀನುಗಾರಿಕಾ ಬೋಟ್ವೊಂದು ಮುಳುಗಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತದಡಿ ಬಂದರಿನಲ್ಲಿ ಘಟನೆ ನಡೆದಿದೆ.
ಸುರೇಂದ್ರ ಹರಿಕಂತ್ರ ಅವರಿಗೆ ಸೇರಿದ ‘ಲಕ್ಷ್ಮೀಕೃಪ’ ಬೋಟ್ ಇಂದು ಮೀನುಗಾರಿಕೆಗೆ ತೆರಳಿತ್ತು. ಬಂದರಿನಿಂದ ಹೊರಟ ಕೆಲವೇ ದೂರದಲ್ಲಿ ಹೂಳು ತುಂಬಿದ ಅಳಿವೆಯಲ್ಲಿ ಬೋಟ್ ಸಿಲುಕಿಕೊಂಡಿದೆ.
ಅಳಿವೆಯಲ್ಲಿ ಅಲೆಗಳ ಹೊಡೆತ ಹೆಚ್ಚಾದ ಹಿನ್ನೆಲೆಯಲ್ಲಿ ಬೋಟ್ನ ತಳಭಾಗ ಹಾನಿಗೊಳಗಾಗಿದೆ. ಪರಿಣಾಮ ನೀರು ಬೋಟ್ ಒಳಗೆ ನುಗ್ಗಿ ಕೆಲವೇ ಕ್ಷಣಗಳಲ್ಲಿ ಬೋಟ್ ಮುಳುಗಿದೆ. ಘಟನೆಯಲ್ಲಿ ಸುಮಾರು ₹20 ಲಕ್ಷ ಮೌಲ್ಯದ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.
ಅಪಾಯದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಮೀನುಗಾರರು ಧಾವಿಸಿ ನಾಲ್ವರು ಮೀನುಗಾರರನ್ನು ರಕ್ಷಿಸಿದ್ದಾರೆ. ಹೀಗಾಗಿ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ತದಡಿ ಅಳಿವೆಯಲ್ಲಿ ಹೂಳು ತುಂಬಿರುವುದರಿಂದ ಬೋಟ್ಗಳು ಸಂಚರಿಸುವುದೇ ಅಪಾಯಕಾರಿಯಾಗಿದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸ್ಥಳದಲ್ಲಿ ಎರಡು ದಿನಗಳ ಹಿಂದಷ್ಟೇ ‘ಶ್ರೀದೇವಿ’ ಹೆಸರಿನ ಬೋಟ್ ಕೂಡ ಮುಳುಗಿತ್ತು.
ಒಂದೇ ವಾರದಲ್ಲಿ ಎರಡು ಬೋಟ್ಗಳು ಮುಳುಗಿರುವ ಹಿನ್ನೆಲೆಯಲ್ಲಿ ತದಡಿ ಅಳಿವೆಯ ಹೂಳು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಒತ್ತಾಯ ಇದೀಗ ಮತ್ತಷ್ಟು ಗಟ್ಟಿಯಾಗಿದೆ.



