ವಿಜಯಸಾಕ್ಷಿ ಸುದ್ದಿ, ಗದಗ
ಅನಾವಶ್ಯಕವಾಗಿ ಬೈಕ್ ಮೇಲೆ ತಿರುಗಾಡುತ್ತಿರುವುದೂ ಅಲ್ಲದೆ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವ್ಯಕ್ತಿಗೆ ಲೇಡಿ ಟೈಗರ್ ಎಂದೇ ಖ್ಯಾತಿಯಾಗಿರುವ, ಪಿಎಸ್ ಐ ಖಡಕ್ ಕಮಲಾ ದೊಡ್ಡಮನಿ ಅವರು ಕಪಾಳಕ್ಕೆ ಬಾರಿಸಿದ್ದಲ್ಲದೇ, ಆ ವ್ಯಕ್ತಿಯನ್ನೂ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಸರ್ಕಾರ ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆ ಈ ಸಂದರ್ಭದಲ್ಲಿ ಬೈಕ್ ಸೇರಿದಂತೆ ವಾಹನಗಳ ಬಳಕೆ ನಿಷೇಧಿಸಿದೆ. ಮಾರುಕಟ್ಟೆಗೆ ಹೋಗುವಾಗ ನಡೆದುಕೊಂಡೇ ಹೋಗಬೇಕು ಎಂದು ಸರ್ಕಾರ ಖಡಕ್ ವಾರ್ನಿಂಗ್ ಮಾಡಿದೆ. ಆದರೂ ಜನಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ತಮ್ಮ ತಪ್ಪು ಮುಂದುವರೆಸುತ್ತಿದ್ದಾರೆ. ಹೀಗಾಗಿ ಪೊಲೀಸರು ಹೈರಾಣಾಗುತ್ತಿದ್ದಾರೆ.
ಹೀಗೆ ಅನಗತ್ಯವಾಗಿ ಹೊರಗೆ ಓಡಾಡುತ್ತಿರುವವರಿಗೆ ರಾಜ್ಯಾದ್ಯಂತ ಪೊಲೀಸರು ಲಾಠಿಯ ರುಚಿ ತೋರಿಸುತ್ತಿದ್ದಾರೆ. ಅಲ್ಲದೇ, ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ನಗರದಲ್ಲಿ ಹೀಗೆ ಅನಗತ್ಯವಾಗಿ ವಾಹನದ ಮೇಲೆ ಬಂದ ಸವಾರನೊಬ್ಬ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ.
ಕೇಳಿದರೆ ನಾನು ಎಮ್ ಎಸ್ ಐಎಲ್ ನೌಕರ… ಬೆಳದಡಿಯಿಂದ ಬರಬೇಕು ಎಂದು ವಾದಿಸಿದ್ದಾನೆ. ಅಲ್ಲದೇ, ಯಾವುದೋ ನಾಯಕರಿಗೆ ಕರೆ ಮಾಡಿ ಪೊಲೀಸರಿಗೆ ಕೊಡಲು ಹೋಗಿದ್ದಾನೆ. ಇದರಿಂದ ಕೆಂಡಾಮಂಡಲವಾದ ಪಿಎಸ್ ಐ ಕಮಲಾ ದೊಡ್ಡಮನಿ ಅವರು ಕಪಾಳಕ್ಕೆ ಹೊಡೆದಿದ್ದಾರೆ. ಫೋನ್ ಕಸಿದುಕೊಳ್ಳಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಬೈಕ್ ಸವಾರ ವಾಗ್ವಾದ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಇಲ್ಲಿನ ಭೂಮರಡ್ಡಿ ಸರ್ಕಲ್ ನಲ್ಲಿ ನಡೆದಿದೆ. ಮಾಧ್ಯಮದ ಸಿಬ್ಬಂದಿಯ ಮೇಲೆಯೂ ಈ ವ್ಯಕ್ತಿ ತನ್ನ ದರ್ಪ ತೋರಿಸಲು ಪ್ರಯತ್ನಿಸಿದ. ಪೊಲೀಸರು ಮಾತ್ರ ಜೀಪ್ ನಲ್ಲಿ ಹಾಕಿಕೊಂಡು ಹೋಗಿದ್ದಾರೆ.
ಸುರೇಶ್ ಸೋಮಯ್ಯ ಹಿರೇಮಠ ಎಂಬಾತನೇ ಪೊಲೀಸರ ಜೊತೆಗೆ ವಾಗ್ವಾದ ನಡೆಸಿ ಪೊಲೀಸರ ಅತಿಥಿಯಾದಾತ ಎಂದು ಪೊಲೀಸ ಮೂಲಗಳು ತಿಳಿಸಿವೆ.