ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪದವೀಧರರು, ಶಿಕ್ಷಕರು ಹಾಗೂ ಉಪನ್ಯಾಸಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಗುರಿಯೊಂದಿಗೆ ಪಶ್ಚಿಮ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಕ್ಷೇತ್ರ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವೆ ಎಂದು ಪಶ್ಚಿಮ ಪದವೀಧರರ ಕ್ಷೇತ್ರ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮತ್ತು ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಮತಯಾಚನೆ ಮಾಡಿ ಅವರು ಮಾತನಾಡಿದರು.
ಕಳೆದ ಅವಧಿಯಲ್ಲಿ ಧಾರವಾಡದಲ್ಲಿ ಎರಡು, ಗದಗ, ಹಾವೇರಿ ಹಾಗೂ ಕಾರವಾರದಲ್ಲಿ ಒಟ್ಟು ೫ ಬಾರಿ ಉದ್ಯೋಗ ಮೇಳ ನಡೆಸಿದ್ದು,1,955 ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಕಾಲ್ಪನಿಕ ವೇತನ ಸೌಲಭ್ಯ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿರುವೆ. 40 ವರ್ಷಗಳಿಂದ ಜನರ ಸಂಪರ್ಕದಲ್ಲಿದ್ದೇನೆ. ಈ ಕ್ಷೇತ್ರಕ್ಕೆ ನಾನು ಹೊಸಬನಲ್ಲ. ಶಿಕ್ಷಕರ, ಪದವೀಧರರ ಸಮಸ್ಯೆಗಳ ಕುರಿತು ಸದನದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಮತ್ತು ನಮ್ಮ ಬಿಜೆಪಿ ಸರ್ಕಾರ ಇದ್ದಾಗಲೂ ಸಾಕಷ್ಟು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿದ್ದೇನೆ.
ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಪ್ಯಾಕೇಜ್ ನೀಡುವಂತೆ ಆಗ್ರಹಿಸಿದ್ದೇನೆ. ಪಶ್ಚಿಮ ಪದವೀಧರರ ಮತಕ್ಷೇತ್ರ ಬಹಳ ದೊಡ್ಡದಾಗಿದ್ದು, ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡಲು ಕಾಲಾವಕಾಶ ಸಾಲುತ್ತಿಲ್ಲ. ಈ ಚುನಾವಣೆಯ ಅಭ್ಯರ್ಥಿ ನಾನಲ್ಲ ನೀವು ಎಂದು ಭಾವಿಸುವ ಮೂಲಕ ಮತ್ತೊಮ್ಮೆ ತಮ್ಮ ಸೇವೆ ಮಾಡಲು ಆಶೀರ್ವಾದ ಮಾಡಬೇಕಿದೆ ಎಂದರು.
ರೋಣ ಬಿಜೆಪಿ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ಉಮೇಶ ಸಂಗನಾಳಮಠ, ಶಶಿಧರ ಸಂಕನಗೌಡ್ರ, ಆನಂದ ಕುಲಕರ್ಣಿ, ಬಸವರಾಜ ವಂಕಲಕುಂಟಿ, ನಿಂಗಪ್ಪ ಕಣವಿ, ಯಲ್ಲಪ್ಪ ಮಣ್ಣೊಡ್ಡರ, ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ, ಡಾ| ಜಿ.ಬಿ. ಹುಲ್ಲೂರ, ವೈ.ಸಿ. ಪಾಟೀಲ, ಎನ್.ಎಂ. ಪವಾಡಿಗೌಡ್ರ, ಜಿ.ಜಿ. ಕೋಟಿ, ಜಿ.ಎಸ್. ಮಠಪತಿ, ಪ.ಪಂ ಸದಸ್ಯರಾದ ಶ್ರೀಶೈಲಪ್ಪ ಬಂಡಿಹಾಳ, ಫಕೀರಪ್ಪ ಮಳ್ಳಿ, ಈರಪ್ಪ ಜೋಗಿ, ಕುಮಾರಸ್ವಾಮಿ ಕೋರಧ್ಯಾನಮಠ, ಮೌನೇಶ ಹೊಸಮನಿ, ಜ್ಯೋತಿ ಪಾಯಪ್ಪಗೌಡ್ರ, ಮಂಜುಳಾ ಹುರಳಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.
ಪದವೀಧರರ ಸಮಸ್ಯೆಗೆ ಪ್ರಾಮಾಣಿಕ ಸ್ಪಂದನೆ: ಸಂಕನೂರ
Advertisement