ಪೊಲೀಸರ ‘ಬೆಂಕಿ’ ಕಾರ್ಯಾಚರಣೆ: ಸಸ್ತಾದಲ್ಲಿ ಚಿನ್ನ ಎಂದು 15 ಲಕ್ಷ ಯಾಮಾರಿಸಿದ್ದ ತಂಡ ಬಲೆಗೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ; ಮೋಸ ಹೋದವರು ಮಡಿಕೇರಿ ಜಿಲ್ಲೆಯವರು. ಮೋಸ ಮಾಡಿದವರು ಬಳ್ಳಾರಿ ಜಿಲ್ಲೆಯವರು. ಆದರೆ ಈ ಪಾಪಕೃತ್ಯ ನಡೆದಿದ್ದು ಗದಗ ಜಿಲ್ಲೆಯಲ್ಲಿ. ಈಗ ಗದಗ ಜಿಲ್ಲೆಯ ಪೊಲೀಸರೇ ‘ಬೆಂಕಿ’ ಕಾರ್ಯಾಚರಣೆ ನಡೆಸಿ ಈ ಪಾಪಕೃತ್ಯದ ಪರಮಪಾಪಿಗಳನ್ನು ಬಂಧಿಸಿದ್ದಾರೆ.

ಸಸ್ತಾದಲ್ಲಿ ಏನೂ ಸಿಕ್ಕರೂ ತಗೊಳ್ಳುವ ಚಪಲ ಕೆಲವರಿಗೆ. ಅದು ಕಳ್ಳ ಮಾಲಿದ್ದರೂ ಇಂತಹ ಆಸೆಬುರುಕರು ಹಿಂದೆಮುಂದೆ ನೋಡಲ್ಲ. ಈ ಪ್ರಕರಣದಲ್ಲೂ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಎಂಬ ಆಸೆಗೆ ಬಿದ್ದು 15 ಲಕ್ಷ ಹಣವನ್ನು ಖದೀಮರ ಕೈಗೆ ಕೊಟ್ಟ ಪುಣ್ಯಾತ್ಮ ಮಡಿಕೇರಿಯವರು.

‘ನಮಗೆ ದೊಡ್ಡ ಪ್ರಮಾಣದಲ್ಲಿ ಚಿನ್ನ ಸಿಕ್ಕಿದೆ. 15 ಕೆಜಿ ಚಿನ್ನವಿದೆ. ಅದನ್ನ ಮಾರ್ಕೆಟ್‌ನಲ್ಲಿ ಮಾರೋಕೂ ಆಗಲ್ಲ. ಕಡಿಮೆ ರೇಟಿಗೆ ಕೊಡ್ತಿವಿ. 15 ಲಕ್ಷಕ್ಕೆ 2 ಕೆಜಿ ಕೊಡ್ತಿವಿ, ತಗೊಳ್ತಿರಾ?’- ಹೀಗೆ ಖದೀಮರ ತಂಡ ಫೋನು ಮಾಡುತ್ತಿತ್ತು. ರಿಸ್ಕ ಬೇಡ ಎಂದವರು ಸುಮ್ಮನಾದರು. ಆದರೆ ಮಗಳ ಮದುವೆಗೆ ಚಿನ್ನದ ಅಗತ್ಯವಿದ್ದವರೊಬ್ಬರು ಯಾಮಾರಿ ಬಿಟ್ಟರು.

ಮಡಿಕೇರಿಯ ಬಾಲಕೃಷ್ಣ ರೈ ಈ ವಂಚಕರ ಮಾತು ನಂಬಿದರು. ಮೊದಲಿಗೆ ವಂಚಕರು ಒಂದು ಸ್ವಲ್ಪ ಅಸಲಿ ಚಿನ್ನವನ್ನು ಸ್ಯಾಂಪಲ್ ಕೊಟ್ಟರು. ಅದನ್ನು ಪರೀಕ್ಷೆ ಮಾಡಿಸಿದ ಬಾಲಕೃಷ್ಣ ರೈ, 15 ಲಕ್ಷಕ್ಕೆ 2 ಕೆಜಿ ಚಿನ್ನ ‘ಖರೀದಿಸಲು’ ರೆಡಿಯಾಗಿಯೇ ಬಿಟ್ಟರು. ಫೋನಿನಲ್ಲಿ ‘ಚಿನ್ನದಾತ’ ಗ್ಯಾಂಗ್ ಅನ್ನು ಸಂಪರ್ಕಿಸಿದರು.

ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ಶಿವಪುರದ ಚಿನ್ನದ ವಂಚಕರು, ಬಾಲಕೃಷ್ಣರಿಗೆ ಗದಗ ಜಿಲ್ಲೆಯ ಬೆಣ್ಣೆ ಹಳ್ಳದ ಬಳಿಯ ಪ್ರದೇಶವೊಂದಕ್ಕೆ ಹಣದೊಂದಿಗೆ ಬರಲು ಹೇಳಿದರು. 2 ಕೆಜಿ ಚಿನ್ನ ಹೊತ್ತೊಯ್ಯುವ ಉಮೇದಿನಲ್ಲಿ ಬಾಲಕೃಷ್ಣ 15 ಲಕ್ಷ ತಂದು ಕಾದರು. ಅವರಲ್ಲಿಗೆ ಬಂದ ವಂಚಕರು 15 ಲಕ್ಷ ರೂ. ಪಡೆದರು. ಬೆಣ್ಣೆಹಳ್ಳದ ಸಮೀಪ ನಿಂತು ಬೆಣ್ಣೆಯಂತಹ ನಾಲ್ಕು ಮಾತಾಡಿ, ಚಿನ್ನ ಇಲ್ಲೇ ಸಮೀಪದಲ್ಲೇ ಇದೆ. ನೀವಿಲ್ಲಿಯೇ ಇರಿ. ನಾವು ತರುತ್ತೇವೆ ಎಂದು ಗಾಯಬ್ ಆದರು.

ಇದು ಕಳೆದ ತಿಂಗಳು ನಡೆದ ಘಟನೆ. 15 ಲಕ್ಷ ಕಳಕೊಂಡ ಬಾಲಕೃಷ್ಣರಿಗೆ ಬೆಣ್ಣೆಹಳ್ಳಕ್ಕೆ ಹಾರುವುದೊಂದೇ ದಾರಿ ಉಳಿದಿತ್ತೇನೊ? ನೀರು ಕಡಿಮೆ ಇದ್ದ ಕಾರಣಕ್ಕೋ ಅಥವಾ ಪೊಲೀಸರ ಮೇಲಿನ ನಂಬಿಕೆಯ ಕಾರಣಕ್ಕೊ ಅವರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಎನ್ನುವುದೇ ಸಮಾಧಾನದ ಸಂಗತಿ. ಸೀದಾ ಬಂದು ಮುಂಡರಗಿ ಪೊಲೀಸರಿಗೆ ದೂರು ನೀಡಿದರು.
ಸಿಪಿಐ ಸುಧೀರ್ ಬೆಂಕಿ ಮುಂಡರಗಿ ಪಟ್ಟಣದಲ್ಲಿರುವ ಎಲ್ಲ ಸಿಸಿಟಿವಿಗಳ ಫೂಟೇಜ್ ತರಿಸಿ ಪರಿಶೀಲಿಸಿದರು. ಬಸ್‌ಸ್ಟ್ಯಾಂಡ್ ಬಳಿ ಅನುಮಾನಸ್ಪಾದವಾಗಿ ಸುತ್ತಾಡಿದ್ದ ತಂಡದ ಬಗ್ಗೆ ಅನುಮಾನ ಮೂಡಿತು.
ತಮ್ಮ ಮಾಹಿತಿ ಮೂಲಗಳನ್ನು ಆಧರಿಸಿ ಅವರು ವಂಚಕರ ಬಗ್ಗೆ ಸುಳಿವು ಪಡೆಯುತ್ತ ಹೋದರು. ಕೊನೆಗೂ ‘ಚಿನ್ನದಾತ’ ವಂಚಕರನ್ನು ಹಿಡಿದು ತಂದು ಜೈಲಿಗೆ ಹಾಕುವಲ್ಲಿ ಬೆಂಕಿಯವರ ತಂಡ ಯಶಸ್ವಿಯಾಗಿದೆ.

ಇನ್ಸ್ಪೆಕ್ಟರ್ ಸುಧೀರ್ ಬೆಂಕಿ

ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ದುರ್ಗಪ್ಪ, ಹನುಮಂತಪ್ಪ, ಆಂಜನೇಯ ಎಂಬ ಮೂವರು ಖದೀಮರನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಖದೀಮರ ಬಂಧನಕ್ಕೆ ಶೋಧ ನಡೆಸಿದ್ದಾರೆ.

    ರೊಕ್ಕ ಏನಾತು?

ಕಳ್ಳ ಖದೀಮರು 15 ಲಕ್ಷ ರೂ.ಗಳನ್ನು ಅರಣ್ಯ ಪ್ರದೇಶದಲ್ಲಿ ಹೂತಿಟ್ಟಿದ್ದಾಗಿ ಹೇಳಿದರು. ಸಿಪಿಐ ಬೆಂಕಿ ಮತ್ತು ತಂಡ ಆರೋಪಗಳ ಜೊತೆ ಅಲ್ಲಿಗೇ ಹೋಗಿ ನೋಡಿದಾಗ ಮಣ್ಣಲ್ಲಿ ಸಿಕ್ಕಿದ್ದು 10 ಲಕ್ಷ ರೂ. ಮಾತ್ರ. ಹಣ ಕಳೆದುಕೊಂಡ ಬಾಲಕೃಷ್ಣರಿಗೆ ಈಗ 10 ಲಕ್ಷ ರೂ ನೀಡಿ ಕಳಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳು ಸಿಕ್ಕ ನಂತರ ಇನ್ನು 5 ಲಕ್ಷ ರೂ ಸಿಗಬಹುದು. ಎಲ್ಲಿಯ ಮಡಿಕೇರಿ, ಎಲ್ಲಿಯ ಬೆಣ್ಣೆ ಹಳ್ಳ?
ಚಿನ್ನದ ಮೋಹ ಹೊಕ್ಕರೆ ಏನೆಲ್ಲ ದುರಂತ ಆಗುತ್ತವೆ ನೋಡಿ.  

ಮುಂಡರಗಿ ಸಿಪಿಐ ಸುಧೀರ್ ಬೆಂಕಿ ನೇತೃತ್ವದಲ್ಲಿ ಪೊಲೀಸರು ಮಹತ್ವದ ಪ್ರಕರಣವನ್ನು ಭೇದಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಚಿನ್ನದ ಹೆಸರಲ್ಲಿ ವಂಚಿಸುವ ಇನ್ನೂ ಕೆಲವು ತಂಡಗಳಿವೆ ಎಂಬ ಅನುಮಾನವಿದೆ. ಆ ತಂಡಗಳನ್ನು ಪತ್ತೆ ಹಚ್ಚಿ ಬಂಧಿಸಲಿದ್ದೇವೆ. ಸಾರ್ವಜನಿಕರು ಈ ಬಗ್ಗೆ ಜಾಗರೂಕರಾಗಿರಬೇಕು. ಸಂಶಯ ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು.
      -ಎನ್ ಯತೀಶ್, ಎಸ್‌ಪಿ, ಗದಗ


Spread the love

LEAVE A REPLY

Please enter your comment!
Please enter your name here