ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಶನಿವಾರವೂ ಮುಂದುವರೆದಿದೆ.
ಸಾರಿಗೆ ನೌಕರರ ಮುಷ್ಕರದ ಪರಿಣಾಮವಾಗಿ ಗದಗ ಜಿಲ್ಲೆಯಲ್ಲಿ ಬಸ್ ಬಂದ್ ಬಿಸಿ ಎರಡನೇ ದಿನವೂ ತಟ್ಟಿದೆ. ನಗರದ ಕೇಂದ್ರಿಯ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಣಗುಡುತ್ತಿದೆ. ಬಸ್ ಸಂಚಾರವಿಲ್ಲದ್ದರಿಂದ ಡಿಪೋದಲ್ಲಿ ಬಸ್ ತುಂಬಿ ತುಳುಕುತ್ತಿವೆ.
ಇನ್ನು ಯಾವೊಬ್ಬ ಸಾರಿಗೆ ನೌಕರರು ನಿಲ್ದಾಣದಲ್ಲಿ ಕಾಣಿಸುತ್ತಿಲ್ಲ. ನಿನ್ನೆ ಬಸ್ ನಿಲ್ಲಿಸಿ ಬಸ್ ಸ್ಟ್ಯಾಂಡ್ ಆವರಣದಲ್ಲಿ ಹರಟೆ ಹೊಡೆಯುತ್ತಿದ್ದ ಚಾಲಕ ಮತ್ತು ನಿರ್ವಾಹಕರು ಬಸ್ ನಿಲ್ದಾಣದ ಕಡೆಗೆ ಸುಳಿದಿಲ್ಲ. ಮತ್ತೊಂಡೆ ಮುಷ್ಕರ ಮುಂದುವರೆದಿರುವ ಬಗ್ಗೆ ಗೊತ್ತಿಲ್ಲದೇ ಬಸ್ ನಿಲ್ದಾಣಕ್ಕೆ ಬೇರೆ ಊರಿಗೆ ಹೋಗಲು ಬಂದ ಪ್ರಯಾಣಿಕರು ಇವತ್ತೂ ಬಸ್ ಪ್ರಾರಂಭವಿಲ್ವಾ ಎಂದು ನಿಲ್ದಾಣಾಧಿಕಾರಿಗಳನ್ನು ಕೇಳಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಮನೆ ಕಡೆ ತೆರಳುತ್ತಿದ್ದಾರೆ.
ಶುಕ್ರವಾರ ಬಸ್ ಸಂಚಾರವಿಲ್ಲದೇ ಊರಿಗೆ ಹೋಗಲು ಪರದಾಡಿದ್ದ ಪ್ರಯಾಣಿಕರು ಶನಿವಾರ ಬಸ್ ನಿಲ್ದಾಣದ ಕಡೆ ಮುಖವೂ ಮಾಡಿಲ್ಲ. ಸದಾ ಜನಜಂಗುಳಿಯಿಂದ ಗಿಜಗುಡುತ್ತಿದ್ದ ಬಸ್ ನಿಲ್ದಾಣ ಖಾಲಿ ಖಾಲಿ ಹೊಡೆಯುತ್ತಿದೆ.
ಇನ್ನೂ ನಿನ್ನೆ ಬಸ್ ಬಂದ್ ಆಗಿದ್ದರಿಂದ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದ ಖಾಸಗಿ ವಾಹನಗಳ ಚಾಲಕರು ಪ್ರಯಾಣಿಕರಿಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಬಸ್ ಬಂದ್ ಹೀಗೆ ಮುಂದುವರೆದರೆ ಊರಿಗೆ ಹೋಗುವುದಾದರೂ ಹೇಗೆ ಚಿಂತೆ ಜನರನ್ನು ಕಾಡುತ್ತಿದೆ.