ಪ್ರಯಾಣಿಕರ ಮೇಲೆ ದರೋಡೆ ನಡೆಸಿದ ದರೋಡೆಕೋರರಿಗೆ ಶಿಕ್ಷೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಕೊಪ್ಪಳ ಜಿಲ್ಲೆಯ ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಾರಾಷ್ಟ್ರದ ಮೂಲದ ಮಹಾದು @ ಮಹಾದೇವ ಕಾಳೆ ಹಾಗೂ ಸಂಪತ್ ಮೋರಾಲೆ ಇವರು ಇನ್ನಿತರರೊಂದಿಗೆ ಕೂಡಿಕೊಂಡು (ಒಟ್ಟು 05 ಜನ ದರೋಡೆಕೋರರು) ಪ್ರಯಾಣಿಕರ ಮೇಲೆ ದರೋಡೆ ನಡೆಸಿರುವ ಆರೋಪವು ಸಾಭಿತಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಆರೋಪಿತರಿಗೆ ಶಿಕ್ಷೆ ವಿಧಿಸಿದ್ದಾರೆ.

ಆಂದ್ರಪ್ರದೇಶ ಮೂಲದ ವೈ.ಕಿರಣ ಕುಮಾರ ಎನ್ನುವವರು 2013ರ ಮಾರ್ಚ್. 17 ರಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಶಿರಡಿಗೆ ಹೋಗುತ್ತಿದ್ದಾಗ ಕೊಪ್ಪಳ ಜಿಲ್ಲೆಯ ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯ ಮ್ಯಾದನೇರಿ ಬಸ್ ನಿಲ್ದಾಣದ ಹತ್ತಿರ ಬೆಳಿಗ್ಗೆ 04 ಗಂಟೆ ಸುಮಾರಿಗೆ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಮಲಗಿಕೊಂಡಿದ್ದಾಗ 05 ಜನ ದರೋಡೆಕೋರರು ಬಂದು ಕಾರಿನಲ್ಲಿದ್ದ ಪ್ರಮಾಣಿಕರಿಗೆ ಮಾರಕಾಸ್ತ್ರಗಳಿಂದ ಹೊಡೆ ಬಡೆ ಮಾಡಿ ಅವರಲ್ಲಿದ್ದ ರೂ. 1,88,100 ಮೌಲ್ಯದ ಹಣ, ಬಂಗಾರ ಮತ್ತು ಮೊಬೈಲ್‌ಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದು, ಈ ಕುರಿತು ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಂದಿನ ತನಿಖಾಧಿಕಾರಿಯಾದ ಯಲಬುರ್ಗಾ ಸಿಪಿಐ ಸುರೇಶ ತಳವಾರ ಅವರು ತನಿಖೆ ಮಾಡಿ ಆರೋಪಿತರ ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಮಹಾರಾಷ್ಟ್ರ ಮೂಲದ ಮಹಾದು @ ಮಹಾದೇವ ಕಾಳೆ ಹಾಗೂ ಸಂಪತ್ ಮೋರಾಲೆ ಇವರು ಇನ್ನಿತರರೊಂದಿಗೆ ಕೂಡಿಕೊಂಡು ದರೋಡೆ ನಡೆಸಿದ ಆರೋಪ ಸಾಬೀತಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಎಲ್. ವಿಜಯಲಕ್ಷ್ಮೀದೇವಿ ಅವರು (ನ. 25) ಆರೋಪಿತರಿಗೆ 06 ವರ್ಷ ಜೈಲು ಶಿಕ್ಷೆ ಹಾಗೂ ತಲಾ ರೂ. 25,000 ಗಳ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಎ ಪಾಟೀಲ, ಕೆ.ನಾಗರಾಜ ಆಚಾರ್, ಸವಿತಾ ಎಂ. ಶಿಗ್ಲಿ ಹಾಗೂ ಟಿ.ಅಂಬಣ್ಣ ಇವರು ಪ್ರಕರಣ ನಡೆಸಿದ್ದು, ಬಂಡಿ ಅಪರ್ಣ ಮನೋಹರ ಅವರು ವಾದ ಮಂಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here