ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅನೈತಿಕ ಸಂಬಂಧ ಹೊಂದಿದ್ದ ಪತ್ನಿ, ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಕಬಲಾಯತಕಟ್ಟಿ ತಾಂಡಾದಲ್ಲಿ ನಡೆದಿದೆ.
ಲಕ್ಷ್ಮಣ ಪಾಂಡಪ್ಪ ಲಮಾಣಿ (39) ಕೊಲೆಯಾದ ದುರ್ದೈವಿಯಾಗಿದ್ದು, ಲಕ್ಷ್ಮಣ್ಣನ ಪತ್ನಿ ಲಲಿತಾ, ಆಕೆಯ ಪ್ರಿಯಕರ ಸೋಮಪ್ಪ ಲಮಾಣಿ ಜೊತೆ ಸೇರಿ, ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಲಲಿತಾ, ಸೋಮಪ್ಪ ನಡುವೆ ಅನೈತಿಕ ಸಂಬಂಧ ಇತ್ತು. ಈ ವಿಷಯ ತಿಳಿದ ಪತಿ ಲಕ್ಷ್ಮಣ ಪತ್ನಿ ಲಲಿತಾ ಜೊತೆಗೆ ನಿತ್ಯವೂ ಜಗಳವಾಡುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದರಿಂದ ಬೇಸತ್ತು ಲಲಿತಾ ಹಾಗೂ ಪ್ರಿಯಕರ ಸೋಮಪ್ಪ ಲಕ್ಷ್ಮಣನನ್ನು ಕೊಲೆ ಮಾಡಿದ್ದಾರೆ. ಗೋವಾದ ಕಲ್ಲಂಗುಟನಲ್ಲಿ ದಂಪತಿಗಳು ಮೀನು ಮಾರಾಟ ಮಾಡುತ್ತಿದ್ದರು. ಲಾಕ್ ಡೌನ್ ಹಿನ್ನೆಲೆ ತಾಂಡಾಗೆ ವಾಪಾಸಾಗಿದ್ದರು. ಕೊಲೆಮಾಡಿದ ನಂತರ ಲಲಿತಾ ಎಂದಿನಂತೆ ಇದ್ದು, ಶವದೊಂದಿಗೆ ರಾತ್ರಿಯಿಡೀ ಮಲಗಿದ್ದಾಳೆ.
ಮುಂಜಾನೆ ಬಾಯಿ ಬಡಿದುಕೊಂಡು, ಜನರನ್ನು ಸೇರಿಸಿದ್ದಾಳೆ. ಬಂದ ಜನ ಕುತ್ತಿಗೆಯ ಮೇಲಿನ ಗುರುತು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕುತ್ತಿಗೆಗೆ ಬಿಗಿದಿದ್ದ ಹಗ್ಗ ವನ್ನು ಲಲಿತಾ ಹಾಗೂ ಸೋಮಪ್ಪ ಸುಟ್ಟು ಹಾಕಿದ್ದು, ಸಾಕ್ಷ್ಯ ನಾಶ ಮಾಡಿದ್ದಾರೆ. ರಾತ್ರಿಯೇ ಲಲಿತಾ ಹಾಗೂ ಸೋಮಪ್ಪರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.