ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡೋರಿಗೆ ಉಪಚುನಾವಣೆಯಲ್ಲಿ ಸಿಗುತ್ತೆ ಉತ್ತರ: ವಿಜಯೇಂದ್ರ

0
Spread the love

ಅಪ್ಪ ರಾಜಾಹುಲಿ, ಮಗ ಬಾಹುಬಲಿ!

-ಕೊಪ್ಪಳ ಜಿಲ್ಲೆಯ ಅಂಜನ ಪರ್ವತ ದಕ್ಷಿಣ ಭಾರತದ ಅಯೋಧ್ಯೆ

-ದೊಡ್ಡ ಪಕ್ಷ ಎಂದು ಬೀಗುತ್ತಿದ್ದ ಕಾಂಗ್ರೆಸ್ ಸೋತು ಸುಣ್ಣವಾಗಿದೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮುಖಂಡರು ಬಿಜೆಪಿ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಾರೆ. ಮುಂಬರಲಿರುವ ಮಸ್ಕಿ, ಬಸವಕಲ್ಯಾಣ ಉಪಚುನಾವಣೆಯಲ್ಲಿ ಅವರಿಗೆ ಉತ್ತರ ಸಿಗುತ್ತೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನ ಪರ್ವತದಲ್ಲಿ ಶನಿವಾರ ಹನುಮನ ದರ್ಶನದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ಸುಖಾಸುಮ್ಮನೆ ಮಾತನಾಡೋರ ಸಂಖ್ಯೆ ಜಾಸ್ತಿಯಾಗಿದೆ. ಅಯೋಧ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದರೂ ವಿರೋಧಪಕ್ಷದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ದೇಶದ ಅತಿ ದೊಡ್ಡ ಪಕ್ಷ ಎಂದು ಬೀಗುತ್ತಿದ್ದ ಕಾಂಗ್ರೆಸ್ ಈಗ ಎಲ್ಲೆಡೆ ಸೋತು ಸುಣ್ಣವಾಗಿದೆ. ಅಸ್ತಿತ್ವ ಇಲ್ಲದ ಕಡೆಯೂ ಬಿಜೆಪಿ ಖಾತೆ ತೆರೆಯುತ್ತಿದೆ. ಜನರ ಒಲವು ಬಿಜೆಪಿ ಕಡೆಗಿದೆ ಎಂದರು.

ಭವ್ಯ ಭಾರತ ಕಟ್ಟುವ ಕನಸು ಪ್ರಧಾನಿ ನರೇಂದ್ರ ಮೋದಿಯವರದ್ದು. ಅವರ ಕನಸು ನನಸಾಗಿಸುವಲ್ಲಿ ಭಾರತೀಯರು ಕೈ ಜೋಡಿಸಬೇಕಿದೆ. ಅದೇ ರೀತಿ ರಾಜ್ಯದ ಕಲ್ಯಾಣಕ್ಕಾಗಿ ಲಕ್ಷಾಂತರ ಕಾರ್ಯಕರ್ತರ ತಪಸ್ಸಿನ ಫಲವಾಗಿ ಯಡಿಯೂರಪ್ಪ ಅವರು ಮತ್ತೊಮ್ಮೆ ರಾಜ್ಯದ ಸಿಎಂ ಆಗಿದ್ದಾರೆ. ನುಡಿದಂತೆ ನಡೆಯುವ ಶಕ್ತಿ ಇರುವ ಯಾರಾದರೂ ವ್ಯಕ್ತಿ ರಾಜ್ಯದಲ್ಲಿ ಇದ್ದಾರೆ ಎಂದರೆ ಅದು ಬಿ.ಎಸ್‌.ಯಡಿಯೂರಪ್ಪ ಮಾತ್ರ ಎಂದು ತಿಳಿಸಿದರು.

ಯಡಿಯೂರಪ್ಪ ಅವರ ವಿಜಯಯಾತ್ರೆಯು ಮಸ್ಕಿ, ಬಸವಕಲ್ಯಾಣ ಉಪಚುನಾವಣೆಯಲ್ಲೂ ಮುಂದುವರಿಯುತ್ತೆ. ಯಡಿಯೂರಪ್ಪ ಅವರಿಗೆ ಎಡರುತೊಡರು ಬಂದರೆ ಅವರು ಅಂಜನೇಯನನ್ನು ಪ್ರಾರ್ಥಿಸುತ್ತಾರೆ. ಅಂಜನಾದ್ರಿಗೂ ಶಿಕಾರಿಪುರಕ್ಕೂ ಅವಿನಾಭಾವ ಸಂಬಂಧ ಇದೆ. ರಾಜಕೀಯ ಏರುಪೇರುಗಳ ಮಧ್ಯೆಯೂ ಬಿಜೆಪಿ ಅಧಿಕಾರಕ್ಕೆ ಬಂದಿದೆ.

ಕೊರೋನಾದಿಂದ ಕತ್ತಲಲ್ಲಿ ಮುಳುಗಿದ ಜನರನ್ನು ಬೆಳಕಿನೆಡೆಗೆ ತಂದು ಅವರಿಗೆ ಧೈರ್ಯ ತುಂಬುವ ಕೆಲಸ ಸರಕಾರದಿಂದ ಆಗುತ್ತಿದೆ. ಜನರು ಸಂಕಷ್ಟಗಳಿಂದ ಮುಕ್ತವಾಗಲೆಂದು ಆಂಜನೇಯನಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಮುಖಂಡರಾದ ಸಾಗರ ಮುನವಳ್ಳಿ, ನವೀನ್ ಗುಳಗಣ್ಣವರ್, ಸಿ.ವಿ.ಚಂದ್ರಶೇಖರ್, ಅಮರೇಶ್ ಕರಡಿ, ಸಂತೋಷ ಕೆಲೋಜಿ ಮತ್ತಿತರರು ಇದ್ದರು.


Spread the love

LEAVE A REPLY

Please enter your comment!
Please enter your name here