ಬೀದಿ ದನಗಳ ಮಾಲೀಕರಿಗೆ ಚಳಿ ಬಿಡಿಸಿದ ಅಧಿಕಾರಿಗಳು

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಗಂಗಾವತಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಓಡಾಟ ದಟ್ಟವಾಗುತ್ತಿದೆ. ಇದರೊಂದಿಗೆ ರಸ್ತೆ ಅಪಘಾತಗಳೂ ಹೆಚ್ಚುತ್ತಿದ್ದು, ಬೀದಿ ದನಗಳು ರಸ್ತೆಯ ಮೇಲೆ ನಿಲ್ಲುವುದು, ಓಡಾಡುವುದು ಹಾಗೂ ಮಲಗುವುದೂ ಪ್ರಮುಖ ಕಾರಣ ಎಂದರಿತ ಪೊಲೀಸ್ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು, ಸೋಮವಾರ ರಾತ್ರಿ ತಂಡಗಳನ್ನು ರಚಿಸಿ, ರಸ್ತೆ ಮೇಲೆ ಮಲಗಿದ್ದ ಜಾನುವಾರುಗಳನ್ನು ಗಂಗಾವತಿ ಪ್ರವಾಸಿ ಮಂದಿರದ ಆವರಣಕ್ಕೆ ಸಾಗಿಸಿದರು.
ಆ ಬಳಿಕ ಅಧಿಕಾರಿಗಳು ಈ ಜಾನುವಾರುಗಳನ್ನು ಕೊಪ್ಪಳದ ಗೋಶಾಲೆಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಾನುವಾರುಗಳ ಮಾಲೀಕರು ಆಗಮಿಸಿ, ಅವುಗಳನ್ನು ಬಿಟ್ಟುಕೊಡುವಂತೆ ಮನವಿ ಮಾಡಿದರು.

ಪೊಲೀಸ್ ಮತ್ತು ನಗರಸಭೆ ಅಧಿಕಾರಿಗಳು ಜಾನುವಾರು ಮಾಲೀಕರನ್ನು ನಗರದ ಪೊಲೀಸ್ ಠಾಣೆಗೆ ಕರೆಸಿ, ಅವರಿಗೆ ಸೂಕ್ತವಾದ ಮಾಹಿತಿ ನೀಡಿ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡರು.
ಡಿವೈಎಸ್ಪಿ ಉಜ್ಜನಕೊಪ್ಪ ಮಾತನಾಡಿ, ಜಾನುವಾರುಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ, ರಸ್ತೆ ಅಪಘಾತಗಳೂ ಸಂಭವಿಸುತ್ತಿವೆ. ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದರೂ ದನಗಳನ್ನು ಬೀದಿಗೆ ಬಿಡುವುದನ್ನು ನಿಲ್ಲಿಸಿಲ್ಲ. ಇದು ಕೊನೆಯ ಅವಕಾಶ. ಇದೇ ವರ್ತನೆ ಮುಂದುವರಿದರೆ ಜಾನುವಾರುಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಗಂಗಾವತಿ ನಗರ ಠಾಣೆಯ ಪಿಎಸ್‌ಐ ವೆಂಕಟಸ್ವಾಮಿ, ನಗರಸಭೆ ಪೌರಾಯುಕ್ತ ಅರವಿಂದ್ ಜಮಖಂಡಿ, ನಗರಸಭೆ ಸಿಬ್ಬಂದಿ ದತ್ತಾತ್ರೇಯ ಹೆಗಡೆ, ನಾಗರಾಜ್, ನೇತ್ರಾವತಿ, ಸಾಮಾಜಿಕ ಹೋರಾಟಗಾರ ಹುಸೇನಪ್ಪ ಅಂಚಿನಾಳ, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಹುಲಿಗೇಶ ಕುಜ್ಜಿ ಉಪಸ್ಥಿತರಿದ್ದರು.
 


Spread the love

LEAVE A REPLY

Please enter your comment!
Please enter your name here