ವಿಜಯಸಾಕ್ಷಿ ಸುದ್ದಿ, ಗದಗ
ದೆಹಲಿಯಲ್ಲಿ ರೈತರ ಹೋರಾಟ ಕ್ಷಣಕ್ಷಣಕ್ಕೂ ಕಾವು ಪಡೆದುಕೊಳ್ಳುತ್ತಿದ್ದಂತೆ ಜಿಲ್ಲೆಯಲ್ಲೂ ಅನ್ನದಾತರ ಹೋರಾಟದ ಕಿಚ್ಚು ಜೋರಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರೈತಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ ನೂರಾರು ರೈತರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಲುವುಗಳನ್ನು ಖಂಡಿಸಿ ಜಿಲ್ಲಾಡಳಿತ ಭವನದ ಎದುರು ಹೋರಾಟ ನಡೆಸಿದರು.
ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ಶಾಶ್ವತ ಖರೀದಿ ಕೇಂದ್ರ ತೆರೆಯಬೇಕು, ಕೇಂದ್ರದ ಕೃಷಿನೀತಿ ಕೈಬಿಡಬೇಕು ಎಂದು ಹೀಗೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಒಲೆ ಹೂಡಿ ಅಡುಗೆ ಮಾಡಿ ಉಪಹಾರ ತಯಾರಿಸುವ ಮೂಲಕ ಧರಣಿ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆಗೆ ಶಾಶ್ವತವಾಗಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಎರಡು ತಿಂಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಇನ್ನೂವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಕೂಡಲೇ ನರಗುಂದದಲ್ಲಿ ಗೋವಿನಜೋಳ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ರೈತಸೇನಾ ರಾಜ್ಯಾಧ್ಯಕ್ಷ ವಿರೇಶ್ ಸೊಬರದಮಠ ಆಗ್ರಹಸಿದರು.
ಭಾರತ್ ಬಂದ್‌ಗೆ ರೈತಸೇನೆ ಬೆಂಬಲ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡುವಂತೆ ಕರೆ ನೀಡಿರುವ ಭಾರತ್ ಬಂದ್‌ಗೆ ಕರ್ನಾಟಕ ರೈತಸೇನೆ ಬೆಂಬಲ ನೀಡಲಿದೆ. ರಾಜ್ಯದ ನಾಲ್ಕು ಜಿಲ್ಲಾ ೧೧ ತಾಲ್ಲೂಕು ಕೇಂದ್ರಗಳಲ್ಲಿ ಬೆಂಬಲಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಜಿಲ್ಲಾಧಿಕಾರಿ ಭರವಸೆ
ಗೋವಿನಜೋಳ ಖರೀದಿ ಕೇಂದ್ರ ಹಾಗೂ ಖರೀದಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಶೀಘ್ರದಲ್ಲೇ ನರಗುಂದದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸೊಬರದಮಠ ತಿಳಿಸಿದರು.