ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಸ್ವಾತಂತ್ರ್ಯ ಮತ್ತು ಹಕ್ಕನ್ನು ರಾಜ್ಯ ಸರ್ಕಾರ ಕಸಿದುಕೊಳ್ಳಲು ಯತ್ನಿಸುತ್ತಿರುವುದು ದುರಂತ ಎಂದು ಸಾಮಾಜಿಕ ಹೋರಾಟಗಾರ ಚಂದ್ರಶೇಖರ ಹರಿಜನ ಹೇಳಿದರು.
ಅವರು ನಗರದ ಗಾಂಧಿ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾನ್ಯ ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುವ ಮೂಲಕ ನಡೆದ ಪತ್ರ ಚಳುವಳಿಯಲ್ಲಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರರ ಭ್ರಷ್ಟಾಚಾರದ ಕುರಿತು ಸುದ್ದಿ ಬಿತ್ತರಿಸಿದ ಖಾಸಗಿ ವಾಹಿನಿ ಮೇಲೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಆ ವಾಹಿನಿಯ ಪ್ರಸಾರವನ್ನು ಬಂದ್ ಮಾಡಿಸಿದ್ದು ಅಕ್ಷಮ್ಯ ಅಪರಾಧವಾಗಿದೆ ಎಂದರು.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಎಷ್ಟು ಗೌರವ ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಗೌರವ ಮಾಧ್ಯಮ ರಂಗಕ್ಕೂ ಇದೆ. ರಾಜ್ಯ ಸರ್ಕಾರ ಇದನ್ನು ಅರಿಯಬೇಕು. ತಪ್ಪು ಯಾರೇ ಮಾಡಿದ್ದರೂ ಕಾನೂನಾತ್ಮಕ ಶಿಕ್ಷೆಯಾಗಲಿ. ಈಗ ಉಂಟಾಗಿರುವ ಸರ್ಕಾರ ಮತ್ತು ಮಾಧ್ಯಮಗಳ ನಡುವಿನ ಬಿಕ್ಕಟ್ಟು ಬಗೆಹರಿಸಲು ನ್ಯಾಯಾಂಗ ಮಧ್ಯಪ್ರವೇಶಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ರೈತ ಹೋರಾಟಗಾರ ಪ್ರಭುರಾಜಗೌಡ ಪಾಟೀಲ, ಮುಖಂಡ ವಿಜಯ ಕಲ್ಮನಿ ಮಾತನಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದ್ದು, ದೇಶ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತೇವೆಂದು ಅಧಿಕಾರಕ್ಕೆ ಬಂದು ಎಲ್ಲ ವಲಯಗಳಲ್ಲಿಯೂ ದುರಂಹಕಾರ ವರ್ತನೆ ನಡೆಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಧಿಕಾರ ನಡೆಸುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗುರು ಮುಳಗುಂದ, ಬಸವರಾಜ ಬೇವಿನಮರದ, ಪ್ರಶಾಂತ ದಾಸರ, ಕನ್ನಡ ಪರ ಹೋರಾಟಗರ ಉಸ್ಮಾನ ಚಿತ್ತಾಪೂರ, ಸಂತೋಷ ಪಾಟೀಲ, ಸೋಹಿಲ್ ನವಲಗುಂದ, ರಾಮು ವಾಲ್ಮೀಕಿ, ಮುಸ್ತಾಕ್ ಬಿಜಾಪೂರ, ಮಹಾಂತೇಶ ಮ್ಯಾಗೇರಿ, ಹನಮಂತ ಮ್ಯಾಗೇರಿ, ಮೈಲಾರಪ್ಪ ಹರಿಜನ, ಗೌಸ ಬೆಟಗೇರಿ ಮುಂತಾದವರು ಉಪಸ್ಥಿತರಿದ್ದರು.