28.7 C
Gadag
Friday, September 22, 2023

ಮೂರೇ ದಿನಕ್ಕೆ ಅಧಿವೇಶನ ಮೊಟಕು? ಕೊರೋನಾ ನೆಪದಲ್ಲಿ ವೈಫಲ್ಯ ಮರೆಮಾಚುವ ಯತ್ನ!

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಇಂದಿನಿಂದ ಆರಂಭವಾಗಿರುವ ವಿಧಾನಸಭಾ ಅಧಿವೇಶನವನ್ನು ಮೂರೇ ದಿನಕ್ಕೆ ಮೊಟಕುಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.10 ದಿನಗಳಿಗೆ ನಿಗದಿಯಾಗಿದ್ದ ಅಧಿವೇಶನವನ್ನು ಕೊರೋನಾ ಸಾಂಕ್ರಾಮಿಕದ ಆತಂಕದ ಕಾರಣಕ್ಕೆ ಮೂರೇ ದಿನಗಳಿಗೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಸಾಮಾಜಿಕ ಅಂತರ ಸೇರಿ ಎಲ್ಲ ಮುಂಜಾಗ್ರತೆ ಅನುಸರಿಸಿದ್ದರೂ ಅಧಿವೇಶನ ಮೊಟಕುಗೊಳಿಸುವುದನ್ನು ವಿಪಕ್ಷಗಳ ಹಲವರು ವಿರೋಧಿಸಿದ್ದಾರೆ.
ಉಭಯ ಸನದನಗಳಲ್ಲಿ ಪ್ರತಿಭಟನೆಗೆ ಇಳಿಯದೇ ವಿಧೇಯಕಗಳ ಮೇಲೆ ಚರ್ಚೆ ಮಾಡಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತೀರ್ಮಾನ ಮಾಡಿದೆ.

ಬೆಂಗಳೂರು ಗಲಭೆ, ಡ್ರಗ್ಸ್ ವಿಚಾರ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿ ಹಗರಣದ ಆರೋಪದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಪ್ರತಿಭಟನೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಇದರಿಂದ ನಿರಾಸೆಯಾಗಿದೆ.

ವಿರೋಧ ಪಕ್ಷಗಳು ಪ್ರತಿಭಟನೆಗೆ ಇಳಿದಷ್ಟು ಸರ್ಕಾರಕ್ಕೆ ಲಾಭವಾಗುತ್ತಿತ್ತು. ಆದರೆ ಇದೀಗ ವಿರೋಧ ಪಕ್ಷ ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಸರ್ಕಾರ ಪ್ರತಿತಂತ್ರ ರೂಪಿಸಿದೆ.
 
ಕೊವಿಡ್ ನೆಪದಲ್ಲಿ 10 ದಿನಗಳ ಕಾಲ ಕರೆದಿರುವ ಅಧಿವೇಶನವನ್ನು ಮೂರೇ ದಿನಕ್ಕೆ ಮೊಟಕುಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವತ್ತು ವಿಧಾನಸೌಧದಲ್ಲಿ ನಡೆಯುವ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರೊಂದಿಗೆ ಇದೇ ವಿಚಾರವನ್ನು ಸಿಎಂ ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ.

ಕೊರೋನಾ ವೈರಸ್ ಹರಡುವ ಆತಂಕವಿರುವುದರಿಂದ ಪ್ರತಿಪಕ್ಷಗಳು ಸದನ ಮೊಟಕುಗೊಳಿಸಲು ಸಹಕಾರ ಕೊಡಬೇಕು ಎಂದು ಸಿಎಂ ಯಡಿಯೂರಪ್ಪ ಕೇಳಲಿದ್ದಾರೆ ಎನ್ನಲಾಗಿದೆ. ಆ ಮೂಲಕ ಚರ್ಚೆ ನಡೆಸದೇ ಹಣಕಾಸು ಸೇರಿದಂತೆ ಎಲ್ಲ ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳುವುದು ಸರ್ಕಾರದ ತಂತ್ರ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಪಕ್ಷದ ಸದಸ್ಯರು ಸರ್ಕಾರಕ್ಕೆ ಈಗಾಗಲೇ 1200 ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಲ್ಲಿ ಚುಕ್ಕೆ ಗುರುತಿನ 100 ಪ್ರಶ್ನೆಗಳಿಗೆ ಸರ್ಕಾರ ಸದನದಲ್ಲಿ ಉತ್ತರಿಸಬೇಕಿದೆ. ಉಳಿದವುಗಳಿಗೆ ಲಿಖಿತ ರೂಪದಲ್ಲಿ ಉತ್ತರಿಸಬೇಕಿದೆ.

19 ಸುಗ್ರೀವಾಜ್ಞೆಗಳು, 10 ತಿದ್ದುಪಡಿ ವಿಧೇಯಕಗಳು ಹಾಗೂ ಹಿಂದಿನ ಅಧಿವೇಶನದಲ್ಲಿ ಮಂಡನೆಯಾಗಿರುವ 2 ವಿಧೇಯಕಗಳಿಗೆ ಸರ್ಕಾರ ಅಂಗೀಕಾರ ಪಡೆದುಕೊಳ್ಳಬೇಕಿದೆ. ಅವುಗಳಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕ, ಭೂಸುಧಾರಣಾ ತಿದ್ದುಪಡಿ ವಿಧೇಯಕ, ಕಾರ್ಮಿಕ ತಿದ್ದುಪಡಿ ಕಾಯಿದೆ, ಸೇರಿದಂತೆ ಹಲವು ಸುಗ್ರೀವಾಜ್ಞೆಗಳು ಸೇರಿವೆ. ಹೀಗಾಗಿ ಕಲಾಪ  ಮೊಟಕುಗೊಳಿಸುವ ಸರ್ಕಾರದ ಸಲಹೆಯನ್ನು ಒಪ್ಪದಿರಲು ಕಾಂಗ್ರೆಸ್ ತೀರ್ಮಾನ ಮಾಡಿದೆ.

ಉಭಯ ಸದನಗಳಲ್ಲಿ ಚರ್ಚೆಯ ಮೂಲಕ 41 ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಬಿಜೆಪಿ ಸರ್ಕಾರ ಬಂದಿದ್ದು, ಹೀಗಾಗಿ ಚರ್ಚೆಯಿಲ್ಲದೆ ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಂಡು ಅಧಿವೇಶನ ಮುಂದಕ್ಕೆ ಹಾಕಲು ತೀರ್ಮಾನ ಮಾಡಲಾಗಿದೆ. ಹಾಗೆ ಮಾಡಲು ಸರ್ಕಾರ ಮುಂದಾದಲ್ಲಿ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಗಲಿದೆ.

     ಸೋಂಕು ಬಾಧಿತ 18 ಶಾಸಕರು

ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ಆಗಿದೆ. ಜೊತೆಗೆ 13 ಶಾಸಕರಿಗೂ ಕೊರೊನಾ ವೈರಸ್ ದೃಢಪಟ್ಟಿದೆ.

ಶಾಸಕರಾದ ಎನ್.ಎ. ಹ್ಯಾರಿಸ್, ಎಚ್.ಪಿ. ಮಂಜುನಾಥ, ಕೆ. ಮಹಾದೇವ, ಬಿ. ನಾರಾಯಣ ರಾವ್, ಡಿ.ಎಸ್. ಹುಲಗೇರಿ, ಬಸನಗೌಡ ದದ್ದಲ್, ವೆಂಕಟರಾವ್ ನಾಡಗೌಡ, ಪ್ರಿಯಾಂಕ್ ಖರ್ಗೆ, ಉಮಾನಾಥ್ ಕೊಟ್ಯಾನ್, ಡಿ.ಸಿ. ಗೌರಿಶಂಕರ, ಎಂ.ಪಿ. ಕುಮಾರಸ್ವಾಮಿ, ಕುಸುಮಾ ಶಿವಳ್ಳಿ ಹಾಗೂ ಬಿ.ಕೆ. ಸಂಗಮೇಶ ಅವರು ವಿಧಾನ ಮಂಡಲ ಅಧಿವೇಶನಕ್ಕೆ ಗೈರು ಹಾಜರಾಗುತ್ತಿದ್ದಾರೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!