- ಮೌನವೇಕೆ? ಕೇವಲ ಗುಲಾಮಗಿರಿಯೇ?
- ಉಚ್ಚಾಟಿತ ಬಿಜೆಪಿ ನಾಯಕನಿಂದ ಕಾರ್ಯಕರ್ತರಿಗೆ ಪ್ರಶ್ನೆ
- ಜಿಲ್ಲಾ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ ವಾಟ್ಸಾಪ್ ಸ್ಟೇಟಸ್
ವಿಜಯಸಾಕ್ಷಿ ಸುದ್ದಿ, ಗದಗ: ‘ನೋಡ್ರಪ್ಪ ಗದುಗಿನ ಬಿಜೆಪಿ ಕಾರ್ಯಕರ್ತರೇ, ನಿಮ್ಮ ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿಯೇ ಪೋಸ್ಟ್ ಹಾಕುತ್ತಿರುವ ಸುರೇಶ್ ಮಗದುಮ್ ಅವರನ್ನು ಯಾಕೆ ಉಚ್ಚಾಟನೆ ಮಾಡುತ್ತಿಲ್ಲ? ಬಿಜೆಪಿ ಕಾರ್ಯಕರ್ತರು ಮೌನವೇಕೆ? ಕೇವಲ ಗುಲಾಮರಾಗಿ ಇರುತ್ತೀರಾ? ನಿಮ್ಮ ಪಕ್ಷದ ಅಧ್ಯಕ್ಷರು ಯಾಕೆ ಸುಮ್ಮನೆ ಕೂಡುತ್ತಿದ್ದಾರೆ? ಎಂದು ಇತ್ತೀಚೆಗಷ್ಟೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮಂಜುನಾಥ ಎಚ್. ಮುಳಗುಂದ ತಮ್ಮ ಪೇಸ್ಬುಕ್ ಪೇಜ್ ನಲ್ಲಿ ಸ್ಟೇಟಸ್ ಹಾಕಿಕೊಳ್ಳುವ ಮೂಲಕ ಜಿಲ್ಲಾ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಮುಖಂಡ ಸುರೇಶ್ ಮುಗದುಮ್ ಎಂಬುವರು ಹಾಕಿದ್ದ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್ ಶಾಟ್ ತೆಗೆದು ತಮ್ಮ ಫೇಸ್ಬುಕ್ ಪೇಜ್ ಗೆ ಹಾಕಿಕೊಂಡು, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರನ್ನು ಪ್ರಶ್ನಿಸಿದ್ದಾರೆ.
ನುಂಗಲಾರದ ತುತ್ತು: ಇದಕ್ಕೆ ಕಾರಣ ಹೀಗಿದೆ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಸಚಿವಾಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಸಿಎಂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕುತ್ತಿರುವುದು ಜಗಜ್ಜಾಹೀರು ಆಗಿದೆ. ಇದು ಯಡಿಯೂರಪ್ಪ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಚಿವಾಕಾಂಕ್ಷಿಗಳಲ್ಲಿ ಓರ್ವರಾಗಿದ್ದ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅಂತೂ ಯಡಿಯೂರಪ್ಪ ವಿರುದ್ಧ ಮಾತಿನ ’ಸಿಡಿ’ಗುಂಡುಗಳನ್ನು ಸಿಡಿಸುತ್ತಿದ್ದಾರೆ. ಇದು ಪಕ್ಷಕ್ಕೆ ಇರುಸು ಮುರುಸುಂಟು ಮಾಡಿದೆ. ಸ್ವ ಪಕ್ಷದ ಕೆಲವರು ಆಂತರಿಕ ಬೆಂಬಲ ನೀಡುತ್ತಿರುವುದು ಗೊತ್ತಿರುವ ಸಂಗತಿ.
ಯತ್ನಾಳ್ ಬೆಂಬಲಿಸಿ ಸ್ಟೇಟಸ್: ಈ ಬೆನ್ನಲ್ಲೇ ಜಿಲ್ಲಾ ಬಿಜೆಪಿಯ ಮುಖಂಡ ಸುರೇಶ್ ಮುಗದುಮ್ ಎಂಬುವರು ಯತ್ನಾಳ್ ಅವರನ್ನು ಬೆಂಬಲಿಸಿ ವಾಟ್ಸಾಪ್ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದು, ಜಿಲ್ಲಾ ಬಿಜೆಪಿಯಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿವೆ.
‘ವರ್ಗಾವಣೆ ದಂಧೆ ಮಾಡಲಿಲ್ಲ. ಯೋಜನೆಗಳಲ್ಲಿ ಇಂದಿಗೂ ಕಮಿಷನ್ ಪಡೆಯಲಿಲ್ಲ. ಅಪ್ಪಟ ಹಿಂದುತ್ವದ ಕಟ್ಟಾಳು. ಜನಸಂಘದಿಂದ ಪಕ್ಷ ಕಟ್ಟಿ ಬೆಳೆಸಿದವರು. ವಾಜಪೇಯಿ ಅವರ ಸಂಪುಟದಲ್ಲಿ ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದರು. ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಅವರ ಜೊತೆ ಹೋಗಲಿಲ್ಲ ಎಂಬ ಕಾರಣಕ್ಕೆ ಇವತ್ತು ಬಿಜೆಪಿಯಲ್ಲಿ ಸೈಡ್ ಲೈನ್’ ಎಂಬ ಅಡಿಬರಹವಿರುವ ಮತ್ತು ಯತ್ನಾಳ್ ಅವರ ಭಾವಚಿತ್ರವಿರುವ ಪೋಸ್ಟ್ ಹಾಕಿದ್ದಾರೆ. ಕಾಡಿಗೆ ಯಾವತ್ತೂ ಸಿಂಹನೇ ರಾಜ ಎಂದು ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಯಡಿಯೂರಪ್ಪ ನಾಯಕರಲ್ಲ?: ನಾಯಕ ಬದಲಾವಣೆ ಕುರಿತು ಚರ್ಚೆಗಳು ಶುರುವಾಗಿರುವ ಹೊತ್ತಲ್ಲೇ ’ನಮ್ಮ ಹಿಂದೂ ಹೃದಯ ಸಾಮ್ರಾಟ್ ಬಸವನಗೌಡ ಪಾಟೀಲ್ ಯತ್ನಾಳ್ ನಮ್ಮ ನಾಯಕರು’ ಎನ್ನುವ ಮೂಲಕ ಯಡಿಯೂರಪ್ಪ ನಮ್ಮ ನಾಯಕರಲ್ಲ ಎಂಬುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಆಪ್ತರೆಂದು ಸುಮ್ಮನಿದ್ದಾರೆಯೇ?: ಇನ್ನು, ಬಿಜೆಪಿ ಕಾರ್ಯಕರ್ತ ಸುರೇಶ್ ಮುಗದುಮ್ ಬಿಜೆಪಿ ಜಿಲ್ಲಾಧ್ಯಕ್ಷ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಸದಾ ಯತ್ನಾಳ್ ಅವರನ್ನು ಬೆಂಬಲಿಸಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರಂತೆ. ಈ ಹಿಂದೆಯೂ ಅನೇಕ ಬಾರಿ ಇಂತಹ ಪೋಸ್ಟ್ ಗಳನ್ನು ಹಾಕಿಕೊಂಡಿರುವ ಉದಾಹರಣೆಗಳಿವೆ. ಮೋಹನ್ ಮಾಳಶೆಟ್ಟಿ ಅವರ ಆಪ್ತ ಎಂಬ ಕಾರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಮಂಜುನಾಥ ಅವರ ಪೋಸ್ಟ್ ಬೆಂಬಲಿಸಿ ಕೆಲವರು, ’ ಧಮ್ ಇಲ್ಲರೀ ಮೆಂಬರ್’ ಎಂದು ಕಮೆಂಟ್ ಮಾಡಿದ್ದು, ಸುರೇಶ್ ಮುಗದುಮ್ ಜಿಲ್ಲಾ ಬಿಜೆಪಿ ಅಧ್ಯಕ್ಷರ ಬೆಂಬಲಿಗ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಂಜುನಾಥ ಅವರು, ’ಬಿಜೆಪಿ ಅಧ್ಯಕ್ಷರ ಚೇಲಾ ಆಗಿರುವುದರಿಂದ ಉಚ್ಚಾಟನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲು ಯತ್ನಿಸಿದ್ದಾರೆ.
ಇದು ರಾಜ್ಯದಂತೆ ಜಿಲ್ಲಾ ಬಿಜೆಪಿಯಲ್ಲೂ ಎಲ್ಲವೂ ಸರಿಯಿಲ್ಲ ಎಂಬುವುದನ್ನು ಸಾರಿ ಹೇಳಿದಂತಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರು ಸುರೇಶ್ ಮುಗದುಮ್ ಅವರ ಮೇಲೆ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
ಮುಳುಗುಂದ ತಲೆದಂಡ
ಕೆಲವು ತಿಂಗಳ ಹಿಂದೆ ನಗರಸಭೆ ಮಾಜಿ ಸದಸ್ಯ ಮಂಜುನಾಥ ಮುಳಗುಂದ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಬಿಜೆಪಿ ನಾಯಕರ ವಿರುದ್ಧ ಹಣ ವಸೂಲಿಯಂತಹ ಗಂಭೀರ ಆರೋಪ ಮಾಡಿದ್ದರು. ಇಬ್ಬರು ನಾಯಕರು ಜಿಲ್ಲೆಯ ೩೫ ಇಲಾಖೆಗಳ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದರು. ಇದರಲ್ಲಿ ಜಿಲ್ಲಾಧ್ಯಕ್ಷರ ಹೆಸರೂ ಇತ್ತೆಂದು ಹೇಳಲಾಗುತ್ತಿತ್ತು. ಜಿಲ್ಲಾ ಬಿಜೆಪಿಯಲ್ಲಿ ಜಾತಿ ರಾಜಕಾರಣ ನಡೆಯುತ್ತಿದ್ದು, ಇಲ್ಲಿ ಕೆಳ ಜಾತಿಯವರಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವಪಕ್ಷದ ಮುಖಂಡನ ಸರಣಿ ಪೋಸ್ಟ್ ನಿಂದ ರೋಸಿ ಹೋಗಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಮಂಜುನಾಥ ಮುಳಗುಂದ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು.