ದಕ್ಷಿಣ ಭಾರತದಲ್ಲಿಯೇ ಮೊದಲ ವಿದ್ಯುನ್ಮಾನ ಮತಯಂತ್ರ (ಇವಿಎಂ) ಉಗ್ರಾಣ ಗದಗದಲ್ಲಿ ನಿರ್ಮಾಣ: ಇಂದು ಲೋಕಾರ್ಪಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಪ್ರಬಲ ವ್ಯವಸ್ಥೆ ಹೊಂದಿರುವ ರಾಷ್ಟ್ರದಲ್ಲಿ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿ ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಸದಾವಕಾಶ ನಮ್ಮ ದೇಶದಲ್ಲಿ ಜಾರಿಯಲ್ಲಿದೆ. ಪ್ರಜೆಗಳ ನಿರ್ಧಾರಗಳನ್ನು ಗೌಪ್ಯತೆಯಿಂದ ಮರಳಿ ಜನತೆಯ ಮುಂದಿಡುವ ಮಹತ್ಕಾರ್ಯ ನಿಭಾಯಿಸುತ್ತಿರುವ ಚುನಾವಣಾ ಆಯೋಗ, ಇದಕ್ಕಾಗಿ ಬಳಕೆ ಮಾಡುವ ವಸ್ತುಗಳ ವಿಶೇಷ ರಕ್ಷಣೆಗಾಗಿ ದಕ್ಷಿಣ ಭಾರತದಲ್ಲಿಯೇ ಮೊದಲ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣ ನಿರ್ಮಿಸಿದ ಕೀರ್ತಿ ಗದಗ ಜಿಲ್ಲೆಗೆ ಸಲ್ಲುತ್ತಿದೆ.

ಭಾರತ ಚುನಾವಣಾ ಆಯೋಗವು ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್ ಸೇರಿದಂತೆ ಚುನಾವಣಾ ಸಲಕರಣೆಗಳ ರಕ್ಷಣೆ ಮತ್ತು ಸುರಕ್ಷತೆಗಾಗಿ 2.65 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತದ ಹಿಂಭಾಗದಲ್ಲಿ ನಿರ್ಮಿಸಿರುವ ಸುಸಜ್ಜಿತ ಕಟ್ಟಡ ಉದ್ಘಾಟನೆಯನ್ನು ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ.ಸಂಜೀವ ಕುಮಾರ ಅವರು ನೆರವೇರಿಸಲಿದ್ದಾರೆ.

ನೂತನ ಇವಿಎಂ ಹಾಗೂ ವೋಟರ್ ವೆರೀಫಯಬಲ್ ಪೇಪರ್ ಅಡಿಟ್ ಟ್ರಯಲ್ (ವಿವಿಪಿಎಟಿ) ಉಗ್ರಾಣದಲ್ಲಿ ಚುನಾವಣಾ ಆಯೋಗದ ನಿಯಮ ಹಾಗೂ ಮಾರ್ಗಸೂಚಿಗಳನ್ವಯ ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗಾಗಿ 4 ಪ್ರತ್ಯೇಕ ಬೃಹತ್ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್ ಗಳನ್ನು ಆಯಾ ವಿಧಾನಸಭಾ ವ್ಯಾಪ್ತಿ ಅನುಸಾರ ಸಂಗ್ರಹಿಸಿಡಲು ಅತ್ಯಾಧುನಿಕ ಮತ್ತು ಮತಗಟ್ಟೆಗಳ ಆಧಾರದಲ್ಲಿ ಸಂಗ್ರಹಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

ನೂತನವಾಗಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ನಾಲ್ಕು ವಿಧಾನಸಭಾ ಕೋಣೆಗಳಿಗೆ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ಪಡಸಾಲೆಯ(ಹಾಲ್) ವಿನ್ಯಾಸ ಮಾಡಿದೆ. ಇದರಲ್ಲಿ ಮೊದಲ ಹಂತದ ತಪಾಸಣೆ ಪ್ರತಿ ಚುನಾವಣೆಯ ಪೂರ್ವದಲ್ಲಿ ಇವಿಎಂ ಮಶೀನ್ ನಿರ್ವಹಣೆ ಹೊತ್ತಿರುವ ಸಂಸ್ಥೆಯಿಂದ ಫಸ್ಟ್‌ ಲೆವೆಲ್ ಚೆಕ್ ನಡೆಸಲು ಸ್ಥಳ ನಿಗದಿ ಮಾಡಲಾಗಿದ್ದು, ಬಳಿಕ ಆಯಾ ವಿಧಾನಸಭಾ ಕ್ಷೇತ್ರದ ಕೋಣೆಗಳಲ್ಲಿ ಸಂಗ್ರಹಿಸುವ ಮತ್ತು ಹೊರಗಡೆ ತೆಗೆಯುವ ವ್ಯವಸ್ಥೆ ಅಳವಡಿಸಲಾಗಿದೆ.

ಕಟ್ಟಡದ ವಿಶೇಷತೆ

ಕಟ್ಟಡವು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದ್ದು, 24*7 ಪೊಲೀಸ್ ಚೌಕಿ, ಕಟ್ಟಡದ ಸುತ್ತಲೂ ಸಿಸಿ ಟಿವಿ ಅಳವಡಿಕೆ, ವೀಕ್ಷಣೆ, ಅಗ್ನಿ, ಹೊಗೆ ಪತ್ತೆ ಯಂತ್ರ, ಹೊಗೆ ಕಾಣಿಸಿಕೊಂಡ ತಕ್ಷಣವೇ ಸೈರನ್, ವಿದ್ಯುತ್ ಶಾರ್ಟ್, ಸರ್ಕ್ಯೂಟ್ ಹಾಗೂ ಬೆಂಕಿಯಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗಿದೆ. ಇಲ್ಲಿ ಸಂಗ್ರಹಿಸುವ ಚುನಾವಣಾ ಸಂಬಂಧಿ ಸಾಮಾಗ್ರಿಗಳು ಮುಂಬರುವ ದಿನಗಳಲ್ಲಿ ಇನ್ನಷ್ಟು ಭದ್ರವಾಗಲಿವೆ.

ಚುನಾವಣಾ ಆಯೋಗ ವಿದ್ಯುನ್ಮಾನ ಮತ ಯಂತ್ರಗಳು ಸೇರಿದಂತೆ ಚುನಾವಣೆಗೆ ಬೇಕಾಗುವ ವಸ್ತುಗಳನ್ನು ಜಗತ್ತಿಗೆ ಮಾದರಿಯಾಗುವ ನಿಟ್ಟಿನಲ್ಲಿ ಮಹತ್ತರವಾದ ಹೆಜ್ಜೆ ಇಟ್ಟಿದ್ದು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್ ಉಗ್ರಾಣಗಳನ್ನು ನಿರ್ಮಿಸಿ ಚುನಾವಣೆಗಳನ್ನು ಎಷ್ಟು ಪಾರದರ್ಶಕ ಮತ್ತು ಪಾವಿತ್ರ್ಯತೆಯಿಂದ ನಡೆಸಲಾಗುತ್ತದೆ ಅದೇ ಮಾದರಿಯಲ್ಲಿ ಅವುಗಳ ಸಂಗ್ರಹಕ್ಕೂ ಆದ್ಯತೆ ನೀಡಿರುವುದು ಗಮನಾರ್ಹ.


Spread the love

LEAVE A REPLY

Please enter your comment!
Please enter your name here