ವಿವಾದಗಳ ಸುಳಿಯಲ್ಲಿ ಅಳವಂಡಿ ಸಿದ್ಧೇಶ್ವರ ಮಠ

0
Spread the love

ವಿಜಯಸಾಕ್ಷಿ ಎಕ್ಸಕ್ಲೂಸೀವ್

//ಮಠ ಪುರಾಣ//

-ಅಪಾರ ಭಕ್ತರನ್ನು ಹೊಂದಿದ್ದರೂ ಕೈ ತಪ್ಪುತ್ತಿರುವ ಮಠಾಧಿಪತಿಯ ಹಿಡಿತ

-ಮಠಾಧೀಶರಾಗಿ ವರ್ಷ ತುಂಬಿದ್ದಕ್ಕೆ ಕೇಕ್ ಕತ್ತರಿಸಿದ ಸ್ವಾಮೀಜಿ!

-ಬಸವರಾಜ ಕರುಗಲ್.
ಕೊಪ್ಪಳ: ಮಠ ಮಾನ್ಯಗಳು ಧಾರ್ಮಿಕ ಹಾಗೂ ಭಕ್ತಿಯ ಕೇಂದ್ರಗಳು ಎಂಬ ಭಾವ ಬಹುತೇಕರಲ್ಲಿದೆ. ಮಠಗಳೆಂದರೆ ಹಾಗಿರುವುದು ಸಹಜವೇ. ಆದರೆ ಕೊಪ್ಪಳ ಜಿಲ್ಲೆಯೊಂದರ ಮಠ ಸದಾ ವಿವಾದದ ಕೇಂದ್ರ ಬಿಂದು. ಇದಕ್ಕೆಲ್ಲ ಕಾರಣ ಮಠಾಧಿಪತಿಯ ಕುಟುಂಬಸ್ಥರು!

ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿರುವ ಶ್ರೀ ಸಿದ್ಧೇಶ್ವರ ಮಠ ಸದ್ಯ ವಿವಾದದ ತಾಣವಾಗಿದೆ. ಈಚೆಗಷ್ಟೇ ವಿಜೃಂಭಣೆಯಿಂದ ಜಾತ್ರಾಮಹೋತ್ಸವದ ಅಂಗವಾಗಿ ರಥೋತ್ಸವ ನಡೆಯಿತು. ರಥೋತ್ಸವದ ಕ್ಷಣಗಳು ಈಗ ಮಠದ ಭಕ್ತರಲ್ಲಿ ಮತ್ತು ಮಠಾಧಿಪತಿಯ ಕುಟುಂಬಸ್ಥರಲ್ಲಿ ಕೋಲಾಹಲ ಸೃಷ್ಟಿಯಾಗುವಂತೆ ಮಾಡಿವೆ!

ರಥದ ಗಾಲಿಗೆ ಹುಟ್ಟು ಮತ್ತು ಸೊನ್ನಿ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯ ಕುಟುಂಬಸ್ಥರು ತಕರಾರು ಮಾಡಿಕೊಂಡಿದ್ದಾರೆ. ಪ್ರತಿ ವರ್ಷದಂತೆ ತೇರು ಎಳೆಯುವ ಸಂದರ್ಭದಲ್ಲಿ ರಥದ ಗಾಲಿಗೆ ಹುಟ್ಟು ಸೊನ್ನಿ ಹಾಕಲಾಗುತ್ತದೆ. ಒಂದು ಚಕ್ರಕ್ಕೆ ಬೈರಾಪುರ ಗ್ರಾಮದ ಭಕ್ತರು ಸೊನ್ನಿ ಹಾಕಿದ್ದಾರೆ. ಅದರಿಂದ ಯಾವ ತೊಂದರೆಯೂ ಆಗಿಲ್ಲ. ಇನ್ನೊಂದು ಚಕ್ರಕ್ಕೆ ಅಳವಂಡಿಯವರು (ಅವರು ಪ್ರತಿ ವರ್ಷ ಹಾಕುತ್ತಿದ್ದವರೇ) ಸೊನ್ನಿ ಹಾಕಿದ್ದಾರೆ. ಅದು ಸಡಿಲವಾಗಿದ್ದರಿಂದ ತೇರೆಳುವಾಗ ರಥ ಅಲುಗಾಡಿದೆಯೇ ಹೊರತು ಯಾವ ಅನಾಹುತವೂ ಸಂಭವಿಸಿಲ್ಲ. ಇದನ್ನೇ ನೆಪ ಮಾಡಿಕೊಂಡ ಸ್ವಾಮೀಜಿ ಕುಟುಂಬಸ್ಥರು “ಜಾತ್ರೆಗೆ ನಿಮ್ಮನ್ಯಾರು ಕರೆದವರು?” ಎಂದು ದರ್ಪ ಮೆರೆದಿದ್ದಾರೆ. ದರ್ಪದ ಈ ನುಡಿ, ಗ್ರಾಮಸ್ಥರ ಸ್ವಾಭಿಮಾನಕ್ಕೆ ಧಕ್ಕೆ ತಂದು ಆಕ್ರೋಶದ ಕಿಡಿಯಾಗಿ ಹೊತ್ತಿಕೊಂಡಿದೆ.

ಇದು ಮಠದ ಕೆಲಸ, ಮಾತನಾಡಬೇಕಾದವರು ಸ್ವಾಮೀಜಿಯೇ ಹೊರತು, ಸ್ವಾಮೀಜಿಯ ಕುಟುಂಬಸ್ಥರಲ್ಲ. ಕುಟುಂಬಸ್ಥರು ಮಠದ ಜಾಗವನ್ನು ಸ್ವಾಮೀಜಿಗೆ ಬಿಟ್ಟು ಕೊಟ್ಟು, ಬೇರೆಡೆ ಹೋಗಲಿ. ಮಠ ಎಂದರೆ ಭಕ್ತಿ‌ಕೇಂದ್ರವಾಗಬೇಕೇ ಹೊರತು ರಾಜಕೀಯ ಸಭೆ ನಡೆಸುವ ತಾಣವಾಗಬಾರದು. ಕುಟುಂಬಸ್ಥರು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದು, ಮೊದಲು ರಾಜಕೀಯ ಸಭೆಗಳನ್ನು ಮಠದಲ್ಲಿ ನಡೆಸುವ ಅನಿಷ್ಠ ಕೈ ಬಿಡಿ ಎಂಬ ಕೂಗು ಮಾರ್ದನಿಸುತ್ತಿದ್ದಂತೆ, ಗ್ರಾಮಸ್ಥರು ಮತ್ತು ಸ್ವಾಮೀಜಿ ಕುಟುಂಬಸ್ಥರ ನಡುವೆ ದೊಡ್ಡ ವಾಗ್ವಾದವೇ ನಡೆದಿದೆ.

ಕೊನೆಗೂ ಗ್ರಾಮದ ಹಿರಿಯ ಮುಖಂಡರು ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡಿದ್ದಾರೆ. ಈ ಸಂಧಾನ ತಾತ್ಕಾಲಿಕವಷ್ಟೇ. ಇಂಥ ಹತ್ತು ಹಲವು ಪಂಚಾಯಿತಿಗಳನ್ನು ಅಳವಂಡಿಯ ಶ್ರೀ ಸಿದ್ದೇಶ್ವರ ಮಠ ಕಂಡಿದೆ.

ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಅಳವಂಡಿಯ ಈಗಿನ ಸ್ವಾಮೀಜಿ ಕಳೆದ ವರ್ಷವಷ್ಟೇ ಪಟ್ಟಕ್ಕೆ ಬಂದಿದ್ದರು. ಅವರಿಗಿಂತ ಹಿಂದಿದ್ದ ಸ್ವಾಮೀಜಿ ಮುಂಡರಗಿ ಕಾಲೊಂದರಲ್ಲಿ ಪಾಠ ಮಾಡುತ್ತಿದ್ದರು. ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಪ್ರೇಮಾಂಕುರವಾಗಿ ಅವರು ಸನ್ಯಾಸತ್ಯ ತ್ಯಜಿಸಿದ್ದರು. ಈಗಿನ ಸ್ವಾಮೀಜಿ ಪೀಠಕ್ಕೆ ಬಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯ, ಕಾರ್ಯಕ್ರಮ ನಡೆಸುವ ಬದಲು ಕೇಕ್ ಕತ್ತರಿಸಿ ವರ್ಷಾಚರಣೆಯನ್ನು ಸಂಭ್ರಮಿಸಿದ್ದೂ ಸಹ ವಿವಾದವಾಗಿದ್ದನ್ನ ಸ್ಮರಿಸಬಹುದು…


Spread the love

LEAVE A REPLY

Please enter your comment!
Please enter your name here