ವಿಜಯಸಾಕ್ಷಿ ಸುದ್ದಿ, ರೋಣ
ಶಿಕ್ಷಕ ದಂಪತಿಗಳ ಮನೆಯ ಬಾಗಿಲಿನ ಚಿಲಕದ ಕೊಂಡಿ ಮುರಿದು ಅಪಾರ ಪ್ರಮಾಣದ ಚಿನ್ನಾಭರಣ, ನಗದು ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಹೊಳೆಆಲೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಗದೀಶ್ ಹೂಗಾರ ಎಂಬುವವರ ಮನೆಯಲ್ಲಿ ಅಸೂಟಿ ಗ್ರಾಮದ ಮುತ್ತಪ್ಪ ಕೊಣ್ಣೂರ ಎಂಬ ಶಿಕ್ಷಕ ದಂಪತಿಗಳು ಬಾಡಿಗೆಗೆ ಇದ್ದರು. ಇಬ್ಬರೂ ಶಿಕ್ಷಕರಾಗಿರುವುದರಿಂದ ಡಿ.4 ರಂದು ಶಾಲೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಯಾರೋ ಖದೀಮರು ಮನೆಗೆ ಕನ್ನ ಹಾಕಿದ್ದಾರೆ.
ಬಾಗಿಲು ಚಿಲಕದ ಕೊಂಡಿ ಮುರಿದು ಒಳಗೆ ಪ್ರವೇಶಿಸಿರುವ ಕಳ್ಳರು ಮನೆಯ ಬೆಡ್ ರೂಮ್ ನ ಟ್ರೆಜುರಿಯಲ್ಲಿಟ್ಟಿದ್ದ ಅಂದಾಜು 1,21,500 ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದಾರೆ.
ಖದೀಮರು ಅರ್ಧ ತೊಲೆ ಬಂಗಾರದ ಉಂಗುರ, ಅರ್ಧ ತೊಲೆ ಕೊರಳ ಚೈನು, 2 ಗ್ರಾಂ ತೂಕದ ಎರಡು ಮಾಟಲ್ ಗಳು, ನಾಲ್ಕು ಜತೆ ಬೆಂಡಾಲಿ(ಕಿವಿಯೋಲೆ), ಡೈಮಂಡ್ ಹಳ್ಳಿನ ಬೆಂಡಾಲಿ ಸೇರಿದಂತೆ 45,000 ರೂ.ನಗದು, ಒಂದು ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.