ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ನ್ಯಾಯಾಧೀಶರ ಮನೆ ಸೇರಿ ರಾಜ್ಯಾದ್ಯಂತ ಅನೇಕ ಕಳ್ಳತನ ಪ್ರಕರಣಗಳಡಿ ಜೈಲು ವಾಸ ಅನುಭವಿಸಿ ತನ್ನ ಪರವಾಗಿ ತಾನೇ ವಾದ ಮಂಡಿಸುವ ಮೂಲಕ ಗಮನ ಸೆಳೆದಿರುವ ಶಿಗ್ಲಿ ಬಸ್ಯಾ (ಬಸವರಾಜ್ ಗಡ್ಡಿ) ತನ್ನ ಬೇಡಿಕೆಗಳ ಈಡೇರಿಕೆಗಾಗಿ ಕೊರಳಿಗೆ ಪಟಾಕಿ ಸರ ಹಾಕಿಕೊಂಡು ಟವರ್ ಏರುವ, ಮರವೇರುವ ಮೂಲಕವೂ ಸುದ್ದಿಯಾಗಿದ್ದ. ಇತ್ತೀಚಿನ ದಿನಗಳಲ್ಲಿ ಈ ಗೊಂದಲಗಳಿಂದ ಹೊರಗುಳಿದಿದ್ದಾನೆ. ಈತನ ಪತ್ನಿ ಗುಲ್ಜಾರಾಬಾನು ಶೇಖ್ ಶಿಗ್ಲಿ ಗ್ರಾಪಂನ 1 ನೇ ವಾರ್ಡಿನಿಂದ ಕಣಕ್ಕಿಳಿದಿದ್ದರು. ಕಬ್ಬಿನ ರೈತ ಚಿತ್ರದಡಿ ಪತ್ನಿ ಪರವಾಗಿ ಮತಯಾಚನೆ ಮಾಡಿದ್ದ. ಮಹಿಳಾ ಅ, ವರ್ಗದ ಮೀಸಲಾತಿ ಇರುವ ಒಂದು ಸ್ಥಾನಕ್ಕೆ ಮೂವರು ಕಣದಲ್ಲಿದ್ದರು. ತುರುಸಿನ ಸ್ಪರ್ಧೆಯಲ್ಲಿ ಗುಲ್ಜಾರಾಬಾನು ಶೇಖ್ ಎರಡು ಮತಗಳಿಂದ ಜಯ ಗಳಿಸಿದ್ದಾರೆ.
ಚುನಾವಣೆಯಲ್ಲಿ ಯಾರಿಗೂ 1 ರೂಪಾಯಿ ಹಣ ಹಂಚಿಲ್ಲ. ಆ ಶಕ್ತಿಯೂ ನಮಗಿಲ್ಲ. ನನ್ನ ವಾರ್ಡಿನ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗುಲ್ಜಾರಾಬಾನು ಪ್ರತಿಕ್ರಿಯಿಸಿದ್ದಾರೆ.