ಸಂಭ್ರಮಿಸುವ ಕ್ರೈಸ್ತರ ಕೈಕಟ್ಟಿ ಹಾಕಿದ ಕೋವಿಡ್; ಸಾಂಸ್ಕೃತಿಕ ಚುವಟಿಕೆಗಳಿಲ್ಲದೇ ಕಳೆಗುಂದಿದ ಕ್ರಿಸ್‌ಮಸ್!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಲ್ಲಿರುವ ರೋಮನ್ ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟೆಂಟ್ ಚರ್ಚ್‌ಗಳಲ್ಲಿ ಕ್ರೈಸ್ತರು ಶುಕ್ರವಾರ ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ಸರಳ ಹಾಗೂ ಸಾಂಪ್ರದಾಯಕವಾಗಿ ಆಚರಿಸಿದರು. ಕೇಕ್ ಕತ್ತರಿಸಿ, ಸಿಹಿ ತಿನ್ನಿಸಿ ಯೇಸುವಿನ ಜನ್ಮದಿನವನ್ನು ಆಚರಿಸಿದ ಕ್ರೈಸ್ತರು ಒಬ್ಬರಿಗೊಬ್ಬರು ಶುಭಾಶಯ ಕೋರಿದರು.

ಪ್ರತಿವರ್ಷ ಕ್ರಿಸ್‌ಮಸ್ ಹಬ್ಬವನ್ನು ಡಿ.24ರ ರಾತ್ರಿಯಿಂದ ಜ.1 ರವರೆಗೆ ಒಂದು ವಾರಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಈ ಅವಧಿಯಲ್ಲಿ ಚರ್ಚ್‌ಗಳಲ್ಲಿ ದಿನನಿತ್ಯ ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ನೃತ್ಯ, ಹಾಡಿನ ಸ್ಪರ್ಧೆಗಳು ಸೇರಿದಂತೆ ಹಲವು ಸಾರ್ವಜನಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಇಂತಹ ಸಂಭ್ರಮಾಚರಣೆಗೆ ಕೊರೊನಾ ಕಡಿವಾಣ ಹಾಕಿದ್ದು, ಕ್ರಿಸ್‌ಮಸ್ ಮೇಲೆ ಕೊರೊನಾ ಕರಿ ನೆರಳು ಆವರಿಸಿತ್ತು. ಸಂಭ್ರಮಿಸುವ ಕೈಗಳನ್ನು ಕೋವಿಡ್ ಕಟ್ಟಿ ಹಾಕಿತ್ತು. ಹಾಗಾಗಿ ನಗರದ ಬಹುತೇಕ ಚರ್ಚ್‌ಗಳಲ್ಲಿ ಯಾವುದೇ ಆಡಂಭರವಿರಲಿಲ್ಲ.

ಸರಳವಾಗಿ ಆಚರಿಸಲಾದ ಈ ಸಲದ ಕ್ರಿಸ್‌ಮಸ್ ಯೇಸುವಿನ ಪ್ರಾರ್ಥನೆಗಷ್ಟೇ ಸೀಮಿತವಾಗಿತ್ತು. ಅಲ್ಲದೇ, ಕೆಲವೇ ಕೆಲವು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬೈಬಲ್‌ನ ಪ್ರಸಂಗಗಳನ್ನು ಓದಿರುವುದು ಈ ಬಾರಿಯ ಕ್ರಿಸ್‌ಮಸ್‌ಗೆ ಸಾಕ್ಷಿಯಾಯಿತು.

ಕ್ರಿಸ್‌ಮಸ್ ದಿನದ ಮುನ್ನಾ ದಿನ ಕ್ರಿಸ್‌ಮಸ್ ಈವ್ಸ್ ರಾತ್ರಿ ಹಬ್ಬದ ನಿಮಿತ್ತ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ, ಬಲಿಪೂಜೆ ಮಾಡುವ ಮೂಲಕ ಸಂತೋಷ ಹಂಚಿಕೊಳ್ಳಲಾಯಿತು. ಪ್ರತಿ ಚರ್ಚ್‌ಗಳಲ್ಲಿ ಮಹೋನ್ನತ ದೇವರಿಗೆ ಮಹಿಮೆ ಸಲ್ಲಿಸುವ ಗೋದಲಿ ನಿರ್ಮಿಸಿ ಕ್ರಿಸ್ತನ ಜನ್ಮ ವೃತ್ತಾಂತ ಸಾರುವ ದೃಶ್ಯಾವಳಿಗಳನ್ನು ಮರುಕಳಿಸಲಾಗಿತ್ತು. ಕೊರೊನಾ ನಿಯಮ ಪಾಲಿಸುವ ಸಲುವಾಗಿ ಈ ಬಾರಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸದೇ, ಕೇವಲ ಯೇಸುವಿನ ಪ್ರಾರ್ಥನೆ ಅಷ್ಟೇ ಮಾಡಲಾಯಿತು.

ಅವಳಿ ನಗರದ ಚರ್ಚ್ ಆಫ್ ಬ್ಲೆಸ್ಸಿಂಗ್, ಸಂತ ಇಗ್ನೇಷಿಯಸ್ ಲೊಯೋಲಾ ಚರ್ಚ್, ಸಿಎಸ್‌ಐ ಬಾಶಲ್ ಮಿಷನ್, ಎಸ್‌ಪಿಜಿ, ಇಎಸ್‌ಐ, ಸಾಲೋಮಿನಿಸ್ಟ್ರಿ, ಚರ್ಚ್ ಆಫ್ ಗಾಡ್, ಹೆಬ್ರನ್ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಸಂಭ್ರಮಾಚರಣೆ ಕಳೆಗುಂದಿತ್ತು.

ಪ್ರತಿವರ್ಷ ಜನರಿಂದ ಗಿಜಗುಡುತ್ತಿದ್ದ ಚರ್ಚ್‌ಗಳಲ್ಲಿ ಈ ವರ್ಷ ಕೊರೊನಾ ಭೀತಿಯಿಂದಾಗಿ ಬೆರಳೆಣಕೆಯಷ್ಟು ಜನರು ಮಾತ್ರ ಕಾಣಿಸುತ್ತಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡು ಯೇಸುವಿನ ಪ್ರಾರ್ಥನೆಯಲ್ಲಿ ತಲ್ಲಿನರಾಗಿದ್ದರು. ಯೇಸುವಿನ ಶಿಲುಬೆಯ ಮುಂದೆ ಮೇಣದ ಬತ್ತಿ ಹಚ್ಚಿ ವೈಯಕ್ತಿಕ ಮತ್ತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ರಾಜ್ಯ ಸರ್ಕಾರ ಕ್ರಿಸ್‌ಮಸ್ ಆಚರಣೆಗೆ ಅವಕಾಶ ಕಲ್ಪಿಸಿತ್ತು. ಆದರೆ, ಇಂತಹ ಸಂದಿಗ್ಧ ಪರಿಸ್ಥತಿಯಲ್ಲಿ ವಿಜೃಂಭಿಸುವುದು ಸೂಕ್ತವಲ್ಲ. ಕೊರೊನಾ ನಿಯಂತ್ರಿಸಲು ಸರ್ಕಾರದೊಂದಿಗೆ ಸಹಕರಿಸಬೇಕಿರುವುದು ನಮ್ಮ ಆದ್ಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳದೇ ಸರಳ ಕ್ರಿಸ್‌ಮಸ್ ಆಚರಿಸುತ್ತಿದ್ದೇವೆ.

ಜಾಕೋಬ್ ಆಂಟೋನಿ, ಸಂತ ಇಗ್ನೇಷಿಯಸ್ ಲೊಯೋಲಾ, ಧರ್ಮ ಕೇಂದ್ರದ ಗುರುಗಳು

Spread the love

LEAVE A REPLY

Please enter your comment!
Please enter your name here