-ಕೊರೋನಾ ಹೆಸರಿನಲ್ಲಿ ಕೇಂದ್ರ-ರಾಜ್ಯ ಸರಕಾರ ಕೋಟಿ ಕೋಟಿ ಲೂಟಿ: ಹಿಟ್ನಾಳ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಜಿಲ್ಲೆಯ ಅಭಿವೃದ್ಧಿ ಕನಸು ಹೊತ್ತು ಬರುವುದಿಲ್ಲ. ಬದಲಾಗಿ ತಮ್ಮ ಕಮಾಯಿ ಗಿಟ್ಟಿಸಿಕೊಳ್ಳಲು ಕೊಪ್ಪಳಕ್ಕೆ ಬಂದು ಸಭೆಯ ಹೆಸರಿನಲ್ಲಿ ವಂತಿಗೆ ಪಡೆಯುತ್ತಾರೆ. ಜಿಲ್ಲೆಯ ಬಾರ್ಗಳಿಂದ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ಗೆ ಮಾಮೂಲಿ ಫಿಕ್ಸ್ ಆಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ನಗರದ ಮೇಘರಾಜ ಕಲ್ಯಾಣಮಂಟಪದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕಿದೆ. ಇವಿಎಂಗಳ ಮುಖಾಂತರ ಮೋಸದಿಂದ ಚುನಾವಣೆ ಗೆಲ್ಲುವ ಬಿಜೆಪಿಗೆ ಬುದ್ದಿ ಕಲಿಸಬೇಕಿದೆ. ರಾಜ್ಯದಲ್ಲಿ ಸರಕಾರವೇ ಇಲ್ಲ. ಇದ್ದರೂ ಸತ್ತಂತಿದೆ. ಕೊಪ್ಪಳ ಜಿಲ್ಲೆಯ ಉಸ್ತುವಾರಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೇ ಮಂತ್ರಿ ಯನ್ನು ತೆಗೆಯಲು ಮನವಿ ಮಾಡಿದ್ದಾರೆ. ಇದುವರೆಗೆ ಸಿಎಂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯನವರು ಮಾಡಿದಂತಹ ಯಾವುದೇ ಯೋಜನೆಗಳನ್ನು ಬಿಜೆಪಿಯವರು ಮಾಡಿಲ್ಲ. ಲವ್ ಜೆಹಾದ್, ಗೋ ಹತ್ಯೆ ಬಿಟ್ರೆ ಬೇರೆ ಏನಿಲ್ಲ. ಯಾವ ಜಾತಿಯವರು ಯಾರನ್ನಾದರೂ ಕಾನೂನು ನಿಗದಿಪಡಿಸಿರುವ ವಯೋಮಾನದವರು ಮದುವೆಯಾದರೆ ಬಿಜೆಪಿಯವರದೇನು ದೊಡ್ಡಸ್ತಿಕೆ? ಬಿಜೆಪಿಯವರು ಬೀದಿಗೆ ಬಿದ್ದ ರೈತರ ಪರವಾಗಿ ಯಾವುದೇ ಕೆಲಸ ಮಾಡುತ್ತಿಲ್ಲ. ಅಧಿಕಾರ ಉಳಿಸಿಕೊಳ್ಳಲು ನಿತ್ಯ ಸರ್ಕಸ್ ಮಾಡುತ್ತಿದ್ದಾರೆ ಬಿಜೆಪಿ ನಾಯಕರು ಎಂದು ಕಿಡಿ ಕಾರಿದರು.
ಗ್ರಾ.ಪಂ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕಿದೆ. ಒಂದೇ ವಾರ್ಡಿನಲ್ಲಿ ಇಬ್ಬರು ಮೂವರು ನಿಲ್ಲದೇ ಗೆಲ್ಲುವ ಕೆಲಸ ಮಾಡಬೇಕಿದೆ. ಅಂದಾಗ ದುಷ್ಟ ಬಿಜೆಪಿಯನ್ನು ದೂರ ಮಾಡಲು ಸಾಧ್ಯ. ನಿಷ್ಟಾವಂತ ಕಾಂಗ್ರೆಸ್ ಬೆಂಬಲಿಗರು ಬಿಜೆಪಿಯ ಆಮಿಷಕ್ಕೆ ಒಳಗಾಗುವುದಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಬೆಂಬಲಿತರಿಗೆ ತಕ್ಕ ಶಾಸ್ತಿ ಕಲಿಸೋಣ ಎಂದು ಕರೆ ನೀಡಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಲಂಚ ಹೊಡೆಯುವುದರಲ್ಲಿ ರಾಜ್ಯ ಕೇಂದ್ರ ಸರಕಾರ ಒಬ್ಬರಿಗಿಂತ ಒಬ್ಬರು ನಾ ಮೇಲು, ನೀ ಮೇಲು ಎಂಬಂತೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮ ರೂಪಿಸುವಲ್ಲಿ ಬಿಜೆಪಿ ನಾಯಕರು ಶೂನ್ಯವಾಗಿದ್ದಾರೆ ಎಂದು ದೂರಿದರು.
ಬಿಜೆಪಿಯವರು ಭಾಷಣ ಮಾಡುವುದನ್ನು ಬಿಟ್ಟರೆ ಬೇರೆ ಯಾವ ಅಭಿವೃದ್ಧಿಯನ್ನು ಮಾಡಿಲ್ಲ. ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿರುವಾಗ ಲಾಠಿ ಬೀಸುವ ಕೆಲಸ ಮಾಡಲಾಗಿದೆ. ಮೋದಿಯವರು ಬಿಹಾರ ರಾಜ್ಯಕ್ಕೆ ಉಚಿತವಾಗಿ ಕೊರೋನಾ ಲಸಿಕೆ ಕೊಡುವ ಮಾತನಾಡುತ್ತಾರೆ. ಹಾಗಾದರೆ ಕರ್ನಾಟಕದವರು ಭಾರತೀಯರಲ್ಲವೇ? ಎಂದು ಅವರು ಪ್ರಶ್ನಿಸಿದರು.
ಕೊರೋನಾ ವಿಚಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಎಲ್ಲವನ್ನೂ ನಾಲ್ಕು ಪಟ್ಟು ಹಣ ಕೊಟ್ಟು ಖರೀದಿ ಮಾಡಲಾಗಿದೆ. ಕೊರೋನಾ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಕೋಟಿ ಕೋಟಿ ಲೂಟಿ ಮಾಡಿದೆ. ಕಾಂಗ್ರೆಸ್ ಮಾತ್ರ ಪ್ರತಿಯೊಂದು ಸಮಾಜವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಪಕ್ಷ. ನೀರಾವರಿ ಯೋಜನೆ, ಆಸ್ಪತ್ರೆ, ಶೈಕ್ಷಣಿಕ ಎಲ್ಲ ಕ್ಷೇತ್ರದಲ್ಲಿ ಮೂರೂವರೆ ಸಾವಿರ ಕೋಟಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಆದರೆ ಬಿಜೆಪಿ ಏನನ್ನು ಮಾಡಿಲ್ಲ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಚುನಾವಣೆ. ಒಳ್ಳೆಯರನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಪಾಠ ಕಲಿಸಬೇಕು ಎಂದು ತಿಳಿಸಿದರು.
ಈ ವೇಳೆ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿಪಂ ಸದಸ್ಯರಾದ ಗೂಳಪ್ಪ ಹಲಗೇರಿ, ಜಿಪಂ ಮಾಜಿ ಸದಸ್ಯ ಜನಾರ್ಧನ ಹುಲಗಿ, ತಾಪಂ ಅಧ್ಯಕ್ಷ ಬಾಲಚಂದ್ರ, ನಗರಸಭೆ ಸದಸ್ಯರಾದ ಗುರು ಹಲಗೇರಿ, ಅಕ್ಬರ್ ಪಾಷಾ ಪಲ್ಟಾನ್ ಮತ್ತಿತರರು ಇದ್ದರು.