ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ:
ಪಟ್ಟಣದಿಂದ ಹೈದರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ದ್ಯಾಂಪೂರ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸವಾರರ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ಹದಗೆಟ್ಟು ದಶಕ ಕಳೆದರೂ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಹಿಡಿ ಡಾಂಬರ್ ಹಾಕುವುದಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಸುಮಾರು 7 ಕಿ.ಮೀ ಉದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿರುವುದರಿಂದ ಸರ್ಕಾರಿ ಬಸ್, ರೈತರ ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಾಹನಗಳು ಸಿಲುಕಿಕೊಳ್ಳುವುದು ಸಾಮಾನ್ಯವಾಗಿದೆ. ರೋಣ-ನರೇಗಲ್ಲ ಮಾರ್ಗವಾಗಿ ಕೊಪ್ಪಳಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಯಲಬುರ್ಗಾ ತಾಲೂಕ ಕುಕನೂರನಿಂದ ಪಟ್ಟಣಕ್ಕೆ ಬರುತ್ತಿದ್ದ ಇಟ್ಟಂಗಿ ತುಂಬಿದ ಟ್ರ್ಯಾಕ್ಟರ್ ದ್ಯಾಂಪೂರ ಗ್ರಾಮದ ಹತ್ತಿರ ಸಿಲುಕಿಕೊಂಡ ಪರಿಣಾಮ ಎರಡ್ಮೂರು ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಬೇರೆ ಬೇರೆ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ಪರದಾಟ ನಡೆಸುವಂತಾಯಿತು.
ಯಲಬುರ್ಗಾ ತಾಲೂಕಿನ ತೊಂಡಿಹಾಳ ಗ್ರಾಮ ಪಂಚಾಯಿತಿ ವತಿಯಿಂದ ಕೊಳವೆ ಬಾವಿಗಳ ಮೂಲಕ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು (ಪೈಪ್ ಲೈನ್) ಮಾಡುವ ಉದ್ದೇಶಕ್ಕಾಗಿ ರಸ್ತೆ ಪಕ್ಕಕ್ಕೆ ದೊಡ್ಡ ದೊಡ್ಡ ಗುಂಡಿಗಳನ್ನು ತೊಡಲಾಗಿತ್ತು. ಪೈಪ್ ಲೈನ್ ಕಾಮಗಾರಿಯ ಗುತ್ತಿಗೆದಾರ ಹಾಗೂ ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ತೆಗ್ಗುಗಳನ್ನು ಸರಿಯಾಗಿ ಮುಚ್ಚದ ಪರಿಣಾಮ ರಸ್ತೆಯಲ್ಲಿ ಬಸ್, ಟ್ರ್ಯಾಕ್ಟರ್ ಸಿಲುಕಿಕೊಂಡಿದೆ ಎನ್ನುತ್ತಾರೆ ಸ್ಥಳೀಯರು.
ಜನಪ್ರತಿನಿಧಿಗಳ ವಿರೋಧ ಸವಾರರ ಆಕ್ರೋಶ : ರಾಜಕಾರಣಿಗಳು ಮತ ಕೇಳಲು ಮಾತ್ರ ಬರುತ್ತಾರೆ. ಅಧಿಕಾರ ಬಂದ ಮೇಲೆ ಮತ ಹಾಕಿದ ಮತದಾರರಿಗೆ ಮೂಲ ಸೌಲಭ್ಯ ಕಲ್ಪಿಸಲು ಆಗುತ್ತಿಲ್ಲ. ಅವರು ಕೇವಲ ಅಧಿಕಾರಕ್ಕಾಗಿ, ಹಣಕ್ಕಾಗಿ ಬಾಯಿ ಬಿಡುತ್ತಿದ್ದಾರೆ ಎಂದು ಎಂದು ತೊಂಡಿಹಾಳ, ಯಲಬುರ್ಗಾ, ಕುಕನೂರ ಗ್ರಾಮದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಎರಡೂ ಗ್ರಾಮಗಳ ಜನರ ನಡುವೆ ವಾಗ್ವಾದ : ತೊಂಡಿಹಾಳ ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಬಸ್,ಟ್ರ್ಯಾಕ್ಟರ್ ಸಿಕ್ಕಿ ಹಾಕಿಕೊಂಡಿದ್ದು, ಗ್ರಾ.ಪಂ ಸಿಬ್ಬಂದಿಗಳೇ ರಸ್ತೆ ಹಾಳು ಮಾಡಿದ್ದಾರೆ ಎಂದು ನರೇಗಲ್ಲನ ಸಾರ್ವಜನಿಕರು ಆರೋಪಿಸಿದರು. ಇದರಿಂದ ಕೆರಳಿದ ತೊಂಡಿಹಾಳ ಗ್ರಾಮಸ್ಥರು, ನಮ್ಮ ವ್ಯಾಪ್ತಿಯ ರಸ್ತೆಗಳು ಉತ್ತಮವಾಗಿವೆ. ನಿಮ್ಮ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ನಿಮ್ಮ ಶಾಸಕರು ಜೀವಂತವಾಗಿದ್ದಾರೆಯೇ? ಅವರಿಗೆ ತಿಳಿಸಿ ರಸ್ತೆ ದುರಸ್ತಿ ಮಾಡಿಸಿಕೊಳ್ಳಲಾಗುತ್ತಿಲ್ಲ ನಿಮಗೆ ಎಂದರು.
ನಂತರ ಮಾಹಿತಿ ಪಡೆದ ಪಪಂ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಿಲುಕಿಕೊಂಡಿದ್ದ ಬಸ್, ಟ್ರ್ಯಾಕ್ಟರ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಸಂಚಾರಕ್ಕೆ ಅನುವುಮಾಡಿಕೊಟ್ಟರು.