ವಿಜಯಸಾಕ್ಷಿ ಸುದ್ದಿ, ಗದಗ: ಹೆತ್ತ ಮಗುವನ್ನೇ ಕೊಂದ ಪಾಪಿ ತಂದೆಗೆ ಮರಣದಂಡನೆ ಶಿಕ್ಷೆ ವಿಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜಶೇಖರ ವಿ ಪಾಟೀಲರು ಈ ಆದೇಶ ನೀಡಿದ್ದಾರೆ.
ಅಪರಾಧಿ ಪ್ರಶಾಂತಗೌಡ ಪಾಟೀಲ್ ನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಈತ ತನ್ನ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದು ಸುಟ್ಟು ಹಾಕಿ ವಿಕೃತಿ ತೋರಿದ್ದ. ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರ ಗ್ರಾಮದ ಪ್ರಶಾಂತಗೌಡ ಪಾಟೀಲ್, ಮಹಿಳೆಯೊಬ್ಬಳನ್ನು ಪ್ರೀತಿ ಮಾಡಿ ಮದುವೆಯಾಗಿ ದೋಖಾ ಮಾಡಿದ್ದ. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿದ್ದ ಈ ಮಗುವನ್ನು ಕೊಲೆ ಮಾಡಿದ್ದ.
ಈತನಿಂದ ನೊಂದ ಮಹಿಳೆ ಜೀವನಾಂಶ ಬೇಡಿ ಕೋರ್ಟ್ ಮೊರೆ ಹೋಗಿದ್ದ ಕಾರಣದಿಂದ ಕುಪಿತಗೊಂಡ ಪ್ರಶಾಂತಗೌಡ ಪಾಟೀಲ್ ತನ್ನ ಒಂದೂವರೆ ವರ್ಷದ ಮಗುವನ್ನು ಕಿಡ್ನಾಪ್ ಮಾಡಿ ಕೊಂದು ಹಾಕಿದ್ದ. ಪ್ರಶಾಂತಗೌಡ ಪಾಟೀಲ್ ಏಪ್ರಿಲ್ 6, 2015 ರಂದು ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡದಲ್ಲಿ ಕೊಲೆ ಮಾಡಿದ್ದ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.