HomeKarnataka Newsಕನಕಗಿರಿ ಶಾಸಕರ “ದಡ್ಡ” ನಡೆ! ರೈತರಿಗೆ ಸೌಲಭ್ಯ ನೀಡುವಲ್ಲೂ ದಢೇಸೂಗೂರು “ಹಸ್ತಾ” ಕ್ಷೇಪ?

ಕನಕಗಿರಿ ಶಾಸಕರ “ದಡ್ಡ” ನಡೆ! ರೈತರಿಗೆ ಸೌಲಭ್ಯ ನೀಡುವಲ್ಲೂ ದಢೇಸೂಗೂರು “ಹಸ್ತಾ” ಕ್ಷೇಪ?

Spread the love

-ಈರುಳ್ಳಿ ಸಂಸ್ಕರಣಾ ಘಟಕ ನಿರ್ಮಾಣ ಫಲಾನುಭವಿಗಳ ಪಟ್ಟಿಗೆ ಕೊಕ್ಕೆ
-ಅಧ್ಯಕ್ಷರಲ್ಲದಿದ್ದರೂ ನಾನೇ ಫೈನಲ್ ಮಾಡ್ತಿನಿ ಎಂದು ಅಧಿಕಾರಿಗಳ ಮೇಲೆ ದಬ್ಬಾಳಿಕೆ

ಭಾಗ-01

-ಬಿಯಸ್ಕೆ.
ವಿಜಯಸಾಕ್ಷಿ ವಿಶೇಷ ವರದಿ, ಕೊಪ್ಪಳ

ರೈತವಿರೋಧಿ ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ಇಂಥ ಸಂಕಷ್ಟದ ನಡುವೆಯೂ ರಾಜ್ಯ ಸರಕಾರ ರೈತರಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ಕೆಲವು ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಆದರೆ ದೇವರು ವರ ಕೊಟ್ಟರೂ ಪೂಜಾರಿ ಬಿಡ ಎನ್ನುವಂತಾಗಿದೆ ಜನರ ಸ್ಥಿತಿ, ಇದಕ್ಕೆ ತಾಜಾ ಉದಾಹರಣೆ ಈರುಳ್ಳಿ ಸಂಸ್ಕರಣಾ ಘಟಕ ನಿರ್ಮಾಣದ ಫಲಾನುಭವಿಗಳ ಪಟ್ಟಿ. ಎಲ್ಲದರಲ್ಲೂ ಮೂಗು ತೂರಿಸುವುದು ಚುನಾಯಿತ ಜನಪ್ರತಿನಿಧಿಗಳ ದೊಡ್ಡಸ್ತಿಕೆ. ಆದರೆ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ದೊಡ್ಡಸ್ತಿಕೆಯ ಜೊತೆಗೆ ತಮಗಿರುವ ದಡ್ಡತನವನ್ನು ಪ್ರದರ್ಶಿಸುತ್ತಿದ್ದಾರೆ.

ಈರುಳ್ಳಿ ಬೆಳೆಗಾರರ ಸಂಕಷ್ಟ ಅರಿತ ಸರಕಾರ ಈರುಳ್ಳಿ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ರೈತರಿಗೆ ಸಬ್ಸಿಡಿ ನೀಡುವ ಸೌಲಭ್ಯ ಆರಂಭಿಸಿದೆ. ಇದಕ್ಕಾಗಿ ತೋಟಗಾರಿಕಾ ಇಲಾಖೆಗೆ ಗುರಿಯನ್ನೂ ನೀಡಿ ರೈತರಿಗೆ ಅನುಕೂಲ ಕಲ್ಪಿಸಬೇಕೆನ್ನುವುದು ಸರಕಾರದ ಮಹಾತ್ವಾಕಾಂಕ್ಷೆ. ಸುಮಾರು 1.25 ಲಕ್ಷ ರೂ.ವೆಚ್ಚದಡಿ ನಿರ್ಮಾಣವಾಗುವ ಪ್ರತಿ ಘಟಕಕ್ಕೆ ಸರಕಾರ ಸುಮಾರು 85 ಸಾವಿರ ರೂಪಾಯಿ ಸಬ್ಸಿಡಿ ನೀಡುತ್ತದೆ. ಇದಕ್ಕೆ ಈರುಳ್ಳಿ ಬೆಳೆಗಾರರಿಂದ ಅರ್ಜಿ ಆಹ್ವಾನಿಸಿ ಅರ್ಹರನ್ನ ಫಲಾನುಭವಿಗಳನ್ನಾಗಿ ಮಾಡಲಾಗುತ್ತದೆ.

ಈರುಳ್ಳಿ ಸಂಸ್ಕರಣಾ ಘಟಕ ಏಕೆ ಬೇಕು?

ಈರುಳ್ಳಿ ಬೆಲೆ ಕುಸಿದು ಬೆಳೆಗಾರರು ಈರುಳ್ಳಿಯನ್ನು ಮಾರಾಟ ಮಾಡಲಾಗದೇ ರಸ್ತೆಗೆ ಚೆಲ್ಲಿ ನಷ್ಟ ಅನುಭಬಿಸುವುದನ್ನು ತಪ್ಪಿಸಲು ರಾಜ್ಯ ಸರಕಾರ ಈರುಳ್ಳಿಯನ್ನು ಸಂರಕ್ಷಿಸಲು ಅಗತ್ಯವಿರುವ ವಾತಾವರಣದ ಜೊತೆಗೆ ಜಮೀನಿನಲ್ಲೇ ಈರುಳ್ಳಿ ಸಂಸ್ಕರಿಸುವ ಕಟ್ಟಡ ನಿರ್ಮಿಸಲು ಸಹಾಯಧನ ನೀಡುತ್ತದೆ. ಇದರಿಂದ ರೈತರು ಹಾಳಾಗಬಹುದಾದ ಈರುಳ್ಳಿಯನ್ನು ಸಂರಕ್ಷಿಸಬಹುದು, ಜೊತೆಗೆ ಆ ಕಟ್ಟಡವನ್ನು ಕೃಷಿಪರ ವಿವಿಧೋದ್ದೇಶಗಳಿಗೂ ಬಳಸಬಹುದು ಎಂಬ ಆಲೋಚನೆಯಿಂದ ಸರಕಾರ ಇದನ್ನು ಆರಂಭಿಸಿದೆ. ಆದರೆ ಈ ಯೋಜನೆಯಲ್ಲೂ ಕೆಲ ಚುನಾಯಿತ ಜನಪ್ರತಿನಿಧಿಗಳು ಅನರ್ಹರ ಹೆಸರನ್ನು ಸೇರಿಸಲು, ಆ ಮೂಲಕ ಸರಕಾರದ ಸಬ್ಸಿಡಿಯಲ್ಲೂ ಪಾಲು ಪಡೆಯಲು ಹುನ್ನಾರ ನಡೆಸಿರುವುದು ಬೆಳಕಿಗೆ ಬಂದಂತಾಗಿದೆ.

ರೈತರನ್ನೇ ವಿಭಜನೆ ಮಾಡಿದ ಶಾಸಕ?

ತೋಟಗಾರಿಕಾ ಇಲಾಖೆ ಯೋಜನೆಯಡಿ ಅರ್ಜಿ ಆಹ್ವಾನಿಸಿದಾಗ ಕೊಪ್ಪಳ ಜಿಲ್ಲಾದ್ಯಂತ ಸಾವಿರಕ್ಕೂ ಅರ್ಜಿ ಬಂದಿವೆ. ಸರಕಾರ ಜಿಲ್ಲೆಗೆ ಕೊಟ್ಟಿರುವ ಗುರಿ 300. ಈಗಾಗಲೇ ಇಲಾಖೆ ಗುರಿ ತಲುಪಿದ್ದು, ಈಗ ಕನಕಗಿರಿ ಹಾಗೂ ಕುಷ್ಟಗಿ ಭಾಗಗಳಿಂದ ಬೇಡಿಕೆ ಬರುತ್ತಿದೆ. ಮೊದಲು ಕುಷ್ಟಗಿ, ಗಂಗಾವತಿಯಲ್ಲಿ ಅಷ್ಟಾಗಿ ಬೇಡಿಕೆ ಈರಲಿಲ್ಲ. 2020-21ನೇ ಸಾಲಿನಡಿ ಯೋಜನೆಯ ಪ್ರಯೋಜನ ಪಡೆಯಲು ಕೊಪ್ಪಳ ತಾಲೂಕಿನಿಂದ 600, ಕುಷ್ಟಗಿ ತಾಲೂಕಿನಿಂದ 150, ಗಂಗಾವತಿ ತಾಲೂಕಿನಿಂದ 60, ಯಲಬುರ್ಗಾ ತಾಲೂಕಿನಿಂದ 100 ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ 90 ಅರ್ಜಿಗಳು ಸಲ್ಲಿಕೆಯಾಗಿವೆ.

ಜಿಲ್ಲೆಯ ಯಾವುದೇ ತಾಲೂಕಿನಲ್ಲೂ ಇರದ ತಾರತಮ್ಯ ಕನಕಗಿರಿ ಕ್ಷೇತ್ರದಲ್ಲಿ ಕಂಡು ಬಂದಿದೆ. ಫಲಾನುಭವಿಗಳ ಆಯ್ಕೆಪಟ್ಟಿ ತಯಾರಿಸಬೇಕಾದವರು ಆಯಾ ಭಾಗದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು. ಆದರೆ ಕನಕಗಿರಿ ಕ್ಷೇತ್ರದಲ್ಲಿ ಅಧಿಕಾರಿಗಳ ಕರ್ತವ್ಯದಲ್ಲಿ ಮೂಗು ತೂರಿಸುವ ಶಾಸಕ ಬಸವರಾಜ ದಢೇಸೂಗೂರು ಫಲಾನುಭವಿ ರೈತರನ್ನೇ ಇವರು ಕಾಂಗ್ರೆಸ್ ನವರು, ಅವರು ಬಿಜೆಪಿ ಪರ ರೈತರು ಎಂದು ವಿಭಜನೆ ಮಾಡುತ್ತಿದ್ದು, ತಮಗೆ ಬೇಕಾದವರಿಗೆ, ಹಾಗೂ ತಾವು ಬಯಸಿದ್ದನ್ನು ಕೊಡುವವರ ಹೆಸರನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಈ ಕುರಿತು ಶಾಸಕ ಬಸವರಾಜ ದಢೇಸೂಗೂರು ಅವರ ಪ್ರತಿಕ್ರಿಯೆ ಪಡೆಯಲು ಅವರ ಮೊಬೈಲ್ ಸಂಖ್ಯೆಗೆ ಹಲವು ಬಾರಿ ಸಂಪರ್ಕ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ಅವರ ಆಪ್ತ ಸಹಾಯಕರೂ ಸಹ ಶಾಸಕರ ಹಾದಿಯನ್ನೇ ಅನುಸರಿಸಿದರು. ಭೀಮಶಿ ಎನ್ನುವ ಆಪ್ತ ಕರೆ ಸ್ವೀಕರಿಸಿದರೂ ಸಾಹೇಬ್ರು ಜನರ ಜೊತೆ ಬ್ಯೂಜಿ ಇದಾರೆ, ಹೇಳ್ತಿನಿ ಎನ್ನುತ್ತಾರೆಯೇ ಹೊರತು ಶಾಸಕರಿಂದ ಪ್ರತಿಕ್ರಿಯೆ ಮಾತ್ರ ಸಿಗಲಿಲ್ಲ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!