ಶಿವಮೊಗ್ಗ: ಕಳೆದ ಕೆಲವು ವರ್ಷಗಳಿಂದ ಶಾಂತವಾಗಿದ್ದ ಮಲೆನಾಡು ನಗರ ಶಿವಮೊಗ್ಗದಲ್ಲಿ ಮತ್ತೆ ಗ್ಯಾಂಗ್‌ವಾರ್ ಸದ್ದು ಮಾಡಿದ್ದು, ರೌಡಿಶೀಟರ್ ಒಬ್ಬನ ಭೀಕರ ಹತ್ಯೆ ನಗರದಲ್ಲಿ ಆತಂಕ ಸೃಷ್ಟಿಸಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಎದುರಾಳಿ ಗುಂಪು ನಡೆಸಿದ ದಾಳಿಯಲ್ಲಿ ರೌಡಿಶೀಟರ್ ನರಸಿಂಹ ಮೃತಪಟ್ಟಿದ್ದಾನೆ.
ನಗರದ ಗಾಂಧಿ ಬಜಾರ್‌ನ 1ನೇ ಕ್ರಾಸ್ ವ್ಯಾಪ್ತಿಯ ಕರಿದೇವರ ಕೇರಿಯಲ್ಲಿ ಈ ಘಟನೆ ನಡೆದಿದ್ದು, ಗೋವಿಂದಾಪುರ ಆಶ್ರಯ ಬಡಾವಣೆಯ ನಿವಾಸಿಯಾಗಿದ್ದ ನರಸಿಂಹನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ತಲೆ, ಕೈ ಸೇರಿದಂತೆ ದೇಹದ ಹಲವು ಭಾಗಗಳಿಗೆ ಮನಬಂದಂತೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ದಾಳಿಯ ತೀವ್ರತೆಗೆ ನರಸಿಂಹ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ಭೀಕರತೆಯಿಂದಾಗಿ ಮೃತದೇಹದ ಕೆಲವು ಭಾಗಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಳೆಯ ದ್ವೇಷ ಹಾಗೂ ರೌಡಿ ಗುಂಪುಗಳ ನಡುವಿನ ವೈಷಮ್ಯವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣದ ಹಿನ್ನೆಲೆ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಮೃತ ನರಸಿಂಹ ವಿರುದ್ಧ ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಜೂಜಾಟ, ಗಾಂಜಾ ದಂಧೆ, ಕೊಲೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.
ಘಟನೆಯ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.



