HomeBengaluru Newsವಿಚ್ಛೇದಿತ ಮಹಿಳೆಯನ್ನೇ ಟಾರ್ಗೆಟ್ ಮಾಡಿದ ಸೈಬರ್ ಖದೀಮರು: ಫೇಸ್ ಬುಕ್ ಸ್ನೇಹದ ಹೆಸರಿನಲ್ಲಿ ₹1.7 ಕೋಟಿ...

ವಿಚ್ಛೇದಿತ ಮಹಿಳೆಯನ್ನೇ ಟಾರ್ಗೆಟ್ ಮಾಡಿದ ಸೈಬರ್ ಖದೀಮರು: ಫೇಸ್ ಬುಕ್ ಸ್ನೇಹದ ಹೆಸರಿನಲ್ಲಿ ₹1.7 ಕೋಟಿ ವಂಚನೆ!

For Dai;y Updates Join Our whatsapp Group

ಬೆಂಗಳೂರು: ಸೈಬರ್ ವಂಚಕರು ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿರುವ ನಡುವೆ, ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯ ಮಾತು ನಂಬಿದ ಯಶವಂತಪುರದ ಮಹಿಳೆಯೊಬ್ಬರು ₹1.7 ಕೋಟಿ ಕಳೆದುಕೊಂಡಿದ್ದು, ಮೋಸವಾಗಿರುವುದು ಗೊತ್ತಾದ ಬಳಿಕ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಗಂಡನಿಂದ ದೂರವಾಗಿದ್ದ ಮಹಿಳೆಗೆ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದು, ಆತ ತಾನು ಯುನೈಟೆಡ್ ಕಿಂಗ್‌ಡಮ್‌ (ಯುಕೆ)ನಲ್ಲಿ ಉದ್ಯೋಗಿಯಾಗಿರುವುದಾಗಿ ಪರಿಚಯಿಸಿಕೊಂಡಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಮೊಬೈಲ್ ಸಂಖ್ಯೆಗಳ ವಿನಿಮಯವಾಗಿದ್ದು, ಸಂಭಾಷಣೆ ವಾಟ್ಸ್‌ಆ್ಯಪ್‌ ಮೂಲಕ ಮುಂದುವರಿದಿತ್ತು.

ಮಹಿಳೆಯ ವಿಶ್ವಾಸ ಗಳಿಸಿದ ಆರೋಪಿ, ಯುಕೆಯಿಂದ ಚಿನ್ನಾಭರಣ, ಡೈಮಂಡ್ ಸೀರೆ ಹಾಗೂ ದುಬಾರಿ ಉಡುಗೊರೆಗಳನ್ನು ಕಳುಹಿಸುವುದಾಗಿ ಹೇಳಿದ್ದ. ತನ್ನ ಮಾತನ್ನು ನಂಬಿಸುವ ಸಲುವಾಗಿ ಉಡುಗೊರೆಗಳ ಫೋಟೋಗಳ ಜೊತೆಗೆ ನಕಲಿ ಕೊರಿಯರ್ ರಸೀದಿಗಳನ್ನೂ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಬಳಿಕ, ಉಡುಗೊರೆಗಳು ದೆಹಲಿಯ ಕಸ್ಟಮ್ಸ್ ಇಲಾಖೆಯಲ್ಲಿ ತಡೆಹಿಡಿಯಲ್ಪಟ್ಟಿದ್ದು, ಅವುಗಳನ್ನು ಬಿಡುಗಡೆಗೊಳಿಸಲು ಹಣ ಪಾವತಿಸಬೇಕಾಗಿದೆ. ತನ್ನ ಬಳಿ ಭಾರತೀಯ ಕರೆನ್ಸಿ ಇಲ್ಲದ ಕಾರಣ ಮೊದಲು ಮಹಿಳೆಯೇ ಹಣ ಪಾವತಿಸಬೇಕು. ಭಾರತಕ್ಕೆ ಬಂದ ಬಳಿಕ ಸಂಪೂರ್ಣ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಆರೋಪಿ ನಂಬಿಸಿದ್ದಾನೆ.

ಇದಾದ ಬಳಿಕ ಕಸ್ಟಮ್ಸ್ ಅಧಿಕಾರಿಯ ಹೆಸರಿನಲ್ಲಿ ಮಹಿಳೆಗೆ ದೂರವಾಣಿ ಕರೆ ಬಂದಿದ್ದು, ಆರಂಭದಲ್ಲಿ ₹40 ಲಕ್ಷವನ್ನು ಆರ್‌ಟಿಜಿಎಸ್‌ (RTGS) ಮೂಲಕ ಪಾವತಿಸಲಾಗಿದೆ. ನಂತರ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಮತ್ತಷ್ಟು ಹಣವನ್ನು ವರ್ಗಾಯಿಸುವಂತೆ ಮಾಡಲಾಗಿದೆ. ಬ್ಯಾಂಕ್ ವರ್ಗಾವಣೆಯ ಜೊತೆಗೆ, ಕೆಲ ಸಂದರ್ಭಗಳಲ್ಲಿ ವಂಚಕರು ಖುದ್ದಾಗಿ ಬಂದು ನಗದು ಹಣವನ್ನೂ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪದೇ ಪದೇ ಹಣ ಕೇಳುತ್ತಿದ್ದರಿಂದ ಅನುಮಾನಗೊಂಡ ಮಹಿಳೆ ಯುಕೆ ನಿವಾಸಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಆತನ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಆಗ ತಾವು ಸೈಬರ್ ವಂಚಕರ ಜಾಲಕ್ಕೆ ಬಿದ್ದಿರುವುದು ಅರಿವಾಗಿ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ತನಿಖೆ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಹಣಕಾಸು ವ್ಯವಹಾರ ನಡೆಸುವಾಗ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img